ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ…
ಗ್ರಾಮ ಪಂಚಾಯತಿಗಳು ಗ್ರಾಮೀಣ ಭಾರತದ ಅಭಿವೃದ್ಧಿಯ ಹೃದಯವಿದ್ದಂತೆ. ಸರ್ಕಾರದ ಅನೇಕ ಜನಕಲ್ಯಾಣ ಯೋಜನೆಗಳು ನೇರವಾಗಿ ಜನರಿಗೆ ತಲುಪಲು ಗ್ರಾಮ ಪಂಚಾಯತ್ಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ.
ರಸ್ತೆ, ಕುಡಿಯುವ ನೀರು, ವಸತಿ, ಉದ್ಯೋಗ, ಪಿಂಚಣಿ, ಕೃಷಿ, ಮಹಿಳಾ ಸಬಲೀಕರಣ, ಆರೋಗ್ಯ, ನೈರ್ಮಲ್ಯದಿಂದ ಹಿಡಿದು ಡಿಜಿಟಲ್ ಸೇವೆಗಳವರೆಗೆ ಗ್ರಾಮಸ್ಥರ ದೈನಂದಿನ ಬದುಕಿನ ಪ್ರತಿಯೊಂದು ಹಂತದಲ್ಲೂ ಗ್ರಾಮ ಪಂಚಾಯತ್ಗಳ ಪಾತ್ರ ಅತ್ಯಂತ ಮಹತ್ವದಾಗಿದೆ.
ಈ ಲೇಖನದಲ್ಲಿ ಗ್ರಾಮ ಪಂಚಾಯತ್ ಮೂಲಕ ಲಭ್ಯವಿರುವ ಪ್ರಮುಖ ಯೋಜನೆಗಳು, ಸೌಲಭ್ಯಗಳು ಹಾಗೂ ಅವುಗಳನ್ನು ಪಡೆಯುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ತಿಳಿಯೋಣ.
ಗ್ರಾಮ ಪಂಚಾಯತಿಗಳ ಜವಾಬ್ದಾರಿಗಳು
ಗ್ರಾಮ ಪಂಚಾಯತ್ ವ್ಯವಸ್ಥೆ ಕೇವಲ ಆಡಳಿತಾತ್ಮಕ ಘಟಕವಲ್ಲ, ಇದು ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಶಕ್ತಿಕೇಂದ್ರ. ಸ್ಥಳೀಯ ಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಪಂಚಾಯತ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮ ಪಂಚಾಯತ್ಗಳ ಪ್ರಮುಖ ಜವಾಬ್ದಾರಿಗಳು ಹೀಗಿವೆ:
- ಪ್ರತೀ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ
- ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ
- ಬೀದಿ ದೀಪಗಳ ವ್ಯವಸ್ಥೆ ಮತ್ತು ನಿರ್ವಹಣೆ
- ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮ ನೈರ್ಮಲ್ಯ ಕಾಪಾಡುವುದು
- ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹ
- ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ
- ಜನನ-ಮರಣ ನೋಂದಣಿ, ಆಸ್ತಿ ತೆರಿಗೆ ಸಂಗ್ರಹ
- ಪ್ರಾಥಮಿಕ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳ ಮೇಲ್ವಿಚಾರಣೆ
ಇವೆಲ್ಲದರ ಮೂಲಕ ಗ್ರಾಮ ಪಂಚಾಯತ್ ಒಂದು ಸ್ವಾವಲಂಬಿ ಮತ್ತು ಅಭಿವೃದ್ಧಿಶೀಲ ಗ್ರಾಮದ ನಿರ್ಮಾಣಕ್ಕೆ ದಿಕ್ಕು ನೀಡುತ್ತದೆ.
ಉದ್ಯೋಗ ಖಾತರಿ ಯೋಜನೆ
ಗ್ರಾಮೀಣ ಜನರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅತ್ಯಂತ ಪ್ರಮುಖವಾಗಿದೆ. ಇದು ಗ್ರಾಮ ಪಂಚಾಯತಿ ಮೂಲಕ ಪಡೆಯಬಹುದಾದ ಪ್ರಮುಖ ಯೋಜನೆಯಾಗಿದೆ.
ಈ ಯೋಜನೆಯ ಮೂಲಕ ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 125 ದಿನಗಳ ಉದ್ಯೋಗ ಖಾತರಿ ನೀಡುವುದಾಗಿದೆ. ಸಾರ್ವತ್ರಿಕ ಹಶಗೂ ವೈಯಕ್ತಿಕ ಕಾಮಗಾರಿಗಳನ್ನು ಒದಗಿಸುವ ಮೂಲಕ ಉದ್ಯೋಗ ಒದಗಿಸಲಾಗುತ್ತದೆ.
ಈ ಯೋಜನೆಯ ವಿಶೇಷತೆ ಎಂದರೆ, ಕೂಲಿಯನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಜಮೆ ಮಾಡಲಾಗುತ್ತದೆ. ಮಧ್ಯವರ್ತಿಗಳಿಲ್ಲದೆ ಹಣ ಜಮೆಯಾಗುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತದೆ.
ಗ್ರಾಮ ಪಂಚಾಯತ್ ಮೂಲಕ ಲಭ್ಯವಿರುವ ವಸತಿ ಯೋಜನೆಗಳು
ಗ್ರಾಮೀಣ ಪ್ರದೇಶದ ವಸತಿ ರಹಿತ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ವಸತಿ ಯೋಜನೆಗಳು ಜಾರಿಯಲ್ಲಿವೆ:
- ಬಸವ ವಸತಿ ಯೋಜನೆ: ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ.
- ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ವಿಶೇಷ ಆದ್ಯತೆ ಹಾಗೂ ಹೆಚ್ಚುವರಿ ಧನಸಹಾಯ.
- ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ): ಕೇಂದ್ರ ಸರ್ಕಾರದ ಯೋಜನೆಯಡಿ ಬಡವರಿಗೆ ಪಕ್ಕಾ ಮನೆ ನಿರ್ಮಿಸಲು ಸಹಾಯಧನ ಮತ್ತು ಸಬ್ಸಿಡಿ.
ಈ ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯ ಮೂಲಕ ಪಾರದರ್ಶಕವಾಗಿ ನಡೆಯುತ್ತದೆ. ಮನೆ ನಿರ್ಮಾಣ ಪ್ರಗತಿಯಂತೆ ಸಹಾಯಧನವನ್ನು ಹಂತ ಹಂತವಾಗಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ಯೋಜನೆಗಳು
ಬಡ ಮತ್ತು ಅಸಹಾಯಕರಿಗೆ ಆರ್ಥಿಕ ಆಸರೆಯಾಗಲು ಗ್ರಾಮ ಪಂಚಾಯತ್ ಮೂಲಕ ಹಲವು ಪಿಂಚಣಿ ಯೋಜನೆಗಳು ಲಭ್ಯವಿವೆ.ಗ್ರಾಮ ಮಾಹಿತಿ
ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲ ಪಿಂಚಣ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ ಹಾಗೂ ಉದ್ಯೋಗಿನಿ ಯೋಜನೆಯ ಪಿಂಚಣಿ ಹಣವು ಪ್ರತಿ ತಿಂಗಳು ನೇರ ನಗದು ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತದೆ.
ಕೃಷಿ ಮತ್ತು ಮಹಿಳಾ ಸಬಲೀಕರಣ ಯೋಜನೆಗಳು
ಗ್ರಾಮ ಪಂಚಾಯತ್ ರೈತರು ಮತ್ತು ಮಹಿಳೆಯರ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತದೆ.
ಕೃಷಿಗೆ ಸಂಬAಧಿಸಿದ ನೆರವು: ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ಮಾಹಿತಿ, ಹನಿ ನೀರಾವರಿ ವ್ಯವಸ್ಥೆಗೆ ಸಹಾಯಧನ ಹಾಗೂ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿಯಂತಹ ಕೃಷಿಗೆ ಸಂಬಂಧಿಸಿದ ನೆರವು ನೀಡಲಾಗುತ್ತದೆ.
ಮಹಿಳಾ ಸಬಲೀಕರಣ: ಸ್ವಸಹಾಯ ಗುಂಪುಗಳ (SHG) ರಚನೆ, ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ತರಬೇತಿ ನೀಡುವ ಮೂಲಕ ಮಹಿಳಾ ಸಬಲೀಕರಣ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ.
ಅಂಗನವಾಡಿ ಸೇವೆಗಳು: ಇನ್ನು ಗ್ರಾಮದ ಅಂಗನವಾಡಿಗಳ ಮಕ್ಕಳಿಗೆ ಪೌಷ್ಟಿಕ ಆಹಾರ, ಗರ್ಭಿಣಿ ಮತ್ತು ಬಾಣಂತಿಯರಿಗೆ ಆರೋಗ್ಯ ತಪಾಸಣೆ ಹಾಗೂ ಪೋಷಣಾ ಮತ್ತು ಲಸಿಕೆ ಸೇವೆಗಳನ್ನು ಒದಗಿಸಲಾಗುತ್ತದೆ.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)
ಗ್ರಾಮಗಳನ್ನು ಬಯಲು ಶೌಚಮುಕ್ತ (ODF) ಮಾಡಲು ಸ್ವಚ್ಛ ಭಾರತ್ ಮಿಷನ್ ಪ್ರಮುಖ ಪಾತ್ರ ವಹಿಸಿದೆ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ, ಮನೆಮನೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ ಕೂಡ ಗ್ರಾಮ ಪಂಚಾಯತಗಳ ಕಾರ್ಯವಾಗಿದೆ.
ಡಿಜಿಟಲ್ ಪಂಚಾಯತ್ ವ್ಯವಸ್ಥೆ
ಡಿಜಿಟಲೀಕರಣದಿಂದಾಗಿ ಈಗ ಗ್ರಾಮ ಪಂಚಾಯತ್ ಸೇವೆಗಳು ಆನ್ಲೈನ್ ಮೂಲಕವೂ ಈ ಕೆಳಗಿನ ಸೇವೆಗಳು ಸಿಗುತ್ತವೆ:
- ಪಂಚತಂತ್ರ 2.0 ಪೋರ್ಟಲ್ ಮೂಲಕ ಆಸ್ತಿ ತೆರಿಗೆ ಪಾವತಿ
- ಇ-ಖಾತಾ (ನಮೂನೆ-9 ಮತ್ತು 11ಬಿ) ಸೇವೆಗಳು
- ಕಟ್ಟಡ ಮತ್ತು ವ್ಯಾಪಾರ ಪರವಾನಗಿ ಅರ್ಜಿ
- ಜನನ-ಮರಣ ಪ್ರಮಾಣ ಪತ್ರ ಡೌನ್ಲೋಡ್
- ವಾಸಸ್ಥಳ ಪ್ರಮಾಣ ಪತ್ರ, ಪಹಣಿ
- ಬಾಪೂಜಿ ಸೇವಾ ಕೇಂದ್ರ ಮೂಲಕ ಡಿಜಿಟಲ್ ನೆರವು
ಗ್ರಾಮ ಪಂಚಾಯತ್ ಯೋಜನೆಗಳ ಲಾಭ ಪಡೆಯುವುದು ಹೇಗೆ?
ಗ್ರಾಮ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಆಯಾ ಯೋಜನೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ಬುಕ್ ಪ್ರತಿ, ಪಾಸ್ಪೋರ್ಟ್ ಅಳತೆಯ ಫೋಟೋ ಮೂಲಕ ಅರ್ಜಿ ಸಲ್ಲಿಸಬಹುದು
ಬಾಪೂಜಿ ಸೇವಾ ಕೇಂದ್ರ ಅಥವಾ ಪಂಚಾಯತ್ ಕಚೇರಿಯ ಮೂಲಕ ಆನ್ಲೈನ್ / ಆಫ್ಲೈನ್ ಅರ್ಜಿ ಸಲ್ಲಿಕೆಗೂ ಅವಕಾಶವಿದೆ.
ಒಟ್ಟಾರೆ ಗ್ರಾಮ ಪಂಚಾಯತ್ಗಳು ಸರ್ಕಾರ ಮತ್ತು ಜನರ ನಡುವೆ ಇರುವ ಅತ್ಯಂತ ಬಲವಾದ ಸಂಪರ್ಕ ಸೇತುವೆಯಾಗಿವೆ. ನಿಮ್ಮ ಹಕ್ಕಿನ ಯೋಜನೆಗಳನ್ನು ತಿಳಿದುಕೊಂಡು, ಗ್ರಾಮ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು.

