ಕುಂದಾಪುರ: ಪ್ರಸಿದ್ಧ ಕುಂಭಾಶಿ ವಿನಾಯಕ ದೇವಸ್ಥಾನದ ಸಮೀಪವಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕಾರಿನ ಮಾಲೀಕತ್ವದ ವಿಚಾರವಾಗಿ ಸಾರ್ವಜನಿಕವಾಗಿ ಗಲಾಟೆ ನಡೆಸಿ ಶಾಂತಿ ಭಂಗ ಉಂಟುಮಾಡಿದ ಘಟನೆ ಶನಿವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಮೂಲದ ನಿತಿನ್ ಎಸ್ ಮತ್ತು ವಿದ್ಯಾ ಪಿ. ದಂಪತಿಗಳ ನಡುವೆ ಕಾರಿನ ವಿಚಾರವಾಗಿ ಹಳೆಯ ವೈಷಮ್ಯವಿತ್ತು ಎನ್ನಲಾಗಿದೆ. ಶನಿವಾರ ಮಧ್ಯಾಹ್ನ ಕುಂಭಾಶಿಯಲ್ಲಿ ದಂಪತಿಗಳು ಹಾಗೂ ಸಂಬಂಧಿಕರು ಹುಂಡೈ ಐ-20 ಕಾರಿನ ವಿಚಾರವಾಗಿ ರಸ್ತೆಯಲ್ಲೇ ಪರಸ್ಪರ ಬೊಬ್ಬೆ ಹಾಕಿ ಗಲಾಟೆ ನಡೆಸಿದ್ದಾರೆ.
ಸ್ಥಳದಲ್ಲಿ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಸಾರ್ವಜನಿಕರು 112 ಸಹಾಯವಾಣಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಧಾವಿಸಿದ ಕುಂದಾಪುರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ವಿಲ್ಫ್ರೇಡ್ ಡಿಸೋಜ ಮತ್ತು ಸಿಬ್ಬಂದಿ, ಉಭಯ ಬಣದವರಿಗೆ ಗಲಾಟೆ ಮಾಡದಂತೆ ತಿಳಿಹೇಳಿ ಸಮಾಧಾನಪಡಿಸಲು ಪ್ರಯತ್ನಿಸಿದ್ದರು.
ಪೊಲೀಸರ ಸೂಚನೆಯ ಹೊರತಾಗಿಯೂ, ಮಧ್ಯಾಹ್ನ 2:30ರ ಸುಮಾರಿಗೆ ನಿತಿನ್ ತಾಯಿ ಸುಕನ್ಯಾ, ವಿದ್ಯಾ ಮತ್ತು ಪ್ರಭಾಕರ್ ಎಂಬುವವರು ಪುನಃ ಜೋರಾಗಿ ಬೊಬ್ಬೆ ಹಾಕುತ್ತಾ ಸಾರ್ವಜನಿಕ ನೆಮ್ಮದಿಗೆ ಭಂಗ ತಂದಿದ್ದಾರೆ. ಕಾರನ್ನು ಜಂಟಿಯಾಗಿ ಖರೀದಿಸಿದ್ದರೂ ದಾಖಲೆಗಳು ವಿದ್ಯಾ ಹೆಸರಿನಲ್ಲಿ ಇರುವುದು ಈ ಕಿತ್ತಾಟಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಸಾರ್ವಜನಿಕ ಸ್ಥಳದಲ್ಲಿ ಗೊಂದಲ ಸೃಷ್ಟಿಸಿ ಶಾಂತಿ ಭಂಗ ಉಂಟುಮಾಡಿದ ಹಿನ್ನೆಲೆಯಲ್ಲಿ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2026, ಕಲಂ 194(2) BNS 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

