ರಾಜ್ ಬಿ. ಶೆಟ್ಟಿ ನಿರ್ಮಾಣದ, ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡಿರುವ ‘ಸು ಫ್ರಂ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಕಡಿಮೆ ಬಜೆಟ್ನಲ್ಲಿ, ಕಡಿಮೆ ಅವಧಿಯಲ್ಲಿ, ಸರಳವಾದ ಕತೆಯೊಂದಿಗೆ, ಯಾವುದೇ ಸ್ಟಾರ್ ನಟರುಗಳಿಲ್ಲದೆ ಸರಳವಾಗಿ ನಿರ್ಮಿಸಲಾಗಿರುವ ‘ಸು ಫ್ರಂ ಸೋ’ ಸಿನಿಮಾ ಕನ್ನಡಿಗರ ಮನಸೂರೆಗೊಳಿಸಿದೆ. ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ.
ಆಗಸ್ಟ್ 1 ರಂದು ಸಿನಿಮಾದ ಮಲಯಾಳಂ ಆವೃತ್ತಿ ಕೇರಳ ರಾಜ್ಯದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಅಲ್ಲಿಯೂ ಸಹ ಜನರ ಅಭಿಮಾನವನ್ನು ಗಳಿಸಿಕೊಂಡಿದೆ. ಮಲಯಾಳಂ ಪ್ರೇಕ್ಷಕರು ಸಹ ‘ಸು ಫ್ರಂ ಸೋ’ ಸಿನಿಮಾವನ್ನು ಅಪ್ಪಿ ಸ್ವಾಗತಿಸಿದ್ದಾರೆ. ಇದೀಗ ಈ ಸಿನಿಮಾ ಮತ್ತೊಂದು ನೆರೆಯ ರಾಜ್ಯಕ್ಕೆ ಕಾಲಿಡುತ್ತಿದ್ದು, ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ನೆರೆಯ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ‘ಸು ಫ್ರಂ ಸೋ’ ಬಿಡುಗಡೆ ಆಗುತ್ತಿದೆ. ಸಿನಿಮಾದ ತೆಲುಗು ಆವೃತ್ತಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 8 ರಂದು ‘ಸು ಫ್ರಂ ಸೋ’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಏಕಕಾಲಕ್ಕೆ ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಇದಕ್ಕೆ ಅಲ್ಲಿನ ಜನರ ರೆಸ್ಪಾನ್ಸ್ ಹೇಗಿರುತ್ತೆ ಕಾದು ನೋಡಬೇಕಷ್ಟೆ.



