ಉಡುಪಿ : ಕಾಂತರ ಸಿಕ್ವೆಲ್ 1 ಚಿತ್ರೀಕರಣ ಪ್ರಾರಂಭವಾದಾಗಿನಿಂದ ಸಾಕಷ್ಟು ದುರಂತಗಳಿಗೆ ಕಾರಣವಾಗಿತ್ತು. ಇದೀಗ ಕಾಂತರ ಸಿಕ್ವೆಲ್ 1 ರ ಚಿತ್ರೀಕರಣ ಪೂರ್ಣಗೊಂಡರು ದುರಂತಗಳ ಸರಣಿ ಪೂರ್ಣಗೊಂಡಿಲ್ಲ. ಕಾಂತರ ಚಿತ್ರದ ಸಹಾ ಕಲಾವಿದರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.
ಈ ಹಿಂದೆ ತೆರೆಕಂಡ ಕಾಂತರ ಚಿತ್ರದಲ್ಲಿ ನ್ಯಾಯವಾದಿ ಪಾತ್ರದಲ್ಲಿ ಬಣ್ಣ ಹಚ್ಚಿದ ಪೆರ್ಡೂರಿನ ಬ್ಯಾಂಕ್ ಆಫ್ ಬರೋಡದ ನಿವೃತ್ತ ಅಧಿಕಾರಿ ಟಿ. ಪ್ರಭಾಕರ್ ಕಲ್ಯಾಣಿ ಮೃತ ಪಟ್ಟಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಇವರು ಮನೆಯಲ್ಲಿ ಕಾಲು ಜಾರಿ ಬಿದಿದ್ದರು. ಇಂದು ಮುಂಜಾನೆ 8.30 ರ ಸುಮಾರಿಗೆ ಇವರಿಗೆ ವಿಪರೀತ ಕೈ ಕಾಲು ನೋವು ಕಾಣಿಸಿಕೊಂಡಿದ್ದು, ಪತ್ನಿಯ ಬಳಿ ಹೇಳಿಕೊಂಡಿದ್ದರು. ತದನಂತರ ಪತ್ನಿ ಚಿಕಿತ್ಸೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಟಿ ಪ್ರಭಾಕರ್ ಇಹಲೋಕ ತ್ಯಜಿಸಿದ್ದಾರೆ.
ರಂಗ ಕಲಾವಿದರಾಗಿದ್ದ ಇವರು ನಾಟಕಗಳಲ್ಲಿ ತಮ್ಮನ್ನ ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ರು. ಕಾಂತರ ಚಿತ್ರದ ಪಾತ್ರಕ್ಕಾಗಿ ತಮ್ಮ ಗಡ್ಡವನ್ನು ಕೂಡ ಕತ್ತರಿಸದೆ, ಸಿನಿಮಾಕ್ಕಾಗಿ ದುಡಿದಿದ್ದಾರೆ.
ಮೃತರಾದ ಟಿ ಪ್ರಭಾಕರ್ ಕಲ್ಯಾಣಿ ಪತ್ನಿ,ಓರ್ವ ಪುತ್ರ ಹಾಗೂ ಅಪಾರ ಮಿತ್ರ ಬಳಗವನ್ನ ಅಗಲಿದ್ದಾರೆ.ಇವರ ಅಂತ್ಯಕ್ರಿಯೆ ಇಂದು ಬೀಡಿನ ಗುಡ್ಡೆ ರುದ್ರ ಭೂಮಿಯಲ್ಲಿ ನೆರವೇರಲಿದೆ.


