ಉಡುಪಿ ಜಿಲ್ಲೆಯ ಕುಂದಾಪುರ ನಗರ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯಲಿರುವ ಶಾರದಾ ಮಹೋತ್ಸವ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 21 ಮತ್ತು 22ರಂದು ಮದ್ಯ ಮಾರಾಟವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಕ್ಟೋಬರ್ 21ರಂದು ಕುಂದಾಪುರ ನಗರದಲ್ಲಿ ಹಾಗೂ ಅಕ್ಟೋಬರ್ 22ರಂದು ಗಂಗೊಳ್ಳಿಯಲ್ಲಿ 52ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಗಳು ಕೋಮು ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ವರದಿ ಸಲ್ಲಿಸಿದ್ದರು.
ಕರ್ನಾಟಕ ಅಬಕಾರಿ ಕಾಯ್ದೆ 1965ರ ನಿಯಮ 21ರಡಿ ದೊರೆತಿರುವ ಅಧಿಕಾರ ಬಳಸಿ, ನಿಗದಿತ ದಿನಗಳಂದು ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 12:00 ಗಂಟೆಯವರೆಗೆ ಬಾರ್, ರೆಸ್ಟೋರೆಂಟ್ ಮತ್ತು ವೈನ್ ಶಾಪ್ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಈ ದಿನಗಳನ್ನು ‘ಡ್ರೈ ಡೇ’ ಎಂದು ಘೋಷಿಸಲಾಗಿದ್ದು, ಕುಂದಾಪುರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜರಾಡಿ ಗ್ರಾಮಗಳಲ್ಲಿ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ.

