ಮುಂಬೈ: ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಗ್ರಾಹಕರ ಡೇಟಾ ಸೋರಿಕೆಯಾಗಿದ್ದು, ಸೈಬರ್ ಭದ್ರತೆಯಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಡಾರ್ಕ್ ವೆಬ್ನಲ್ಲಿ ಲಭ್ಯವಿದ್ದ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ಪರಿಶೀಲನೆ ನಡೆಸಿದಾಗ, ಅದರಲ್ಲಿ 3,897 ಗ್ರಾಹಕರ ವೈಯಕ್ತಿಕ ಗುರುತಿನ ಮಾಹಿತಿಯುಳ್ಳ (PII) ಪ್ರಮುಖ ದಾಖಲೆಗಳು ಸೋರಿಕೆಯಾಗಿರುವುದು ಪತ್ತೆಯಾಗಿದೆ ಎಂದು ಎಸ್ಬಿಐ ಸಂಸ್ಥೆ ದೃಢಪಡಿಸಿದೆ.
ಬ್ಯಾಂಕ್ಗೆ ಈ ಸೋರಿಕೆಯ ಸುಳಿವು ಅಕ್ಟೋಬರ್ 16 ರಂದು ದೊರೆತಿತ್ತು. ಥ್ರೆಟ್ ಇಂಟೆಲಿಜೆನ್ಸ್ ಸೇವಾ ಪೂರೈಕೆದಾರರು, ರಕ್ಷಣಾ ಸೈಬರ್ ಏಜೆನ್ಸಿ ಹಾಗೂ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಜಂಟಿಯಾಗಿ ನೀಡಿದ ಮಾಹಿತಿಯ ಆಧಾರದ ಮೇಲೆ, ಗ್ರಾಹಕರ ತೀವ್ರ ಸಂವೇದನಾಶೀಲ ಡೇಟಾ ಡಾರ್ಕ್ ವೆಬ್ನಲ್ಲಿ ಬಹಿರಂಗವಾಗಿರುವ ಶಂಕೆ ವ್ಯಕ್ತವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಬ್ಯಾಂಕ್ ಅಧಿಕಾರಿಗಳು ಮತ್ತು ಸೈಬರ್ ತಜ್ಞರು ಪ್ರಾಥಮಿಕ ತನಿಖೆ ನಡೆಸಿ ಪ್ರಸ್ತುತ ಈ ಡೇಟಾ ಸೋರಿಕೆಯನ್ನು ಖಚಿತಪಡಿಸಿದ್ದಾರೆ.
ಯಾವೆಲ್ಲ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ?
ಲಭ್ಯವಿರುವ ವರದಿಗಳ ಪ್ರಕಾರ, ಸೋರಿಕೆಯಾದ ಮಾಹಿತಿಯಲ್ಲಿ ಗ್ರಾಹಕರ ಹೆಸರು, ಜನ್ಮ ದಿನಾಂಕ, ಲಿಂಗ, ನೋಂದಾಯಿತ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಹಾಗೂ ವಸತಿ ವಿಳಾಸಗಳು ಸೇರಿವೆ. ಇದರೊಂದಿಗೆ ಬ್ಯಾಂಕ್ ಶಾಖೆ, ಸಿಐಎಫ್ (CIF) ಗುರುತಿನ ಸಂಖ್ಯೆ, ಲೀಡ್ ಐಡಿ, ಸಾಲದ ವಿವರಗಳು ಹಾಗೂ ಇತರೆ ಪ್ರಮುಖ ಬ್ಯಾಂಕಿಂಗ್ ದಾಖಲೆಗಳ ಪೂರ್ಣ ವಿವರಗಳೂ ಒಳಗೊಂಡಿವೆ. ಇದು ಗ್ರಾಹಕರ ಹಣಕಾಸಿನ ಭದ್ರತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಸೈಬರ್ ವಲಯದಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಎಸ್ಬಿಐ, ಸೋರಿಕೆಯಾಗಿರುವ ಡೇಟಾದ ನೈಜತೆ ಹಾಗೂ ಸಂಪೂರ್ಣತೆಯನ್ನು ಪರಿಶೀಲಿಸಲು ವಿಸ್ತೃತ ತನಿಖೆಯ ಅಗತ್ಯವಿದೆ ಎಂದಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಯಾವ ಮೂಲದಿಂದ ಈ ಡೇಟಾ ಹೊರಹೋಗಿದೆ, ಇದರ ಒಟ್ಟು ವ್ಯಾಪ್ತಿ ಎಷ್ಟು ಹಾಗೂ ಇದರಿಂದ ಗ್ರಾಹಕರು ಮತ್ತು ಬ್ಯಾಂಕ್ಗೆ ಎದುರಾಗಬಹುದಾದ ಸಾಂಭಾವ್ಯ ಅಪಾಯಗಳನ್ನು ನಿಖರವಾಗಿ ಅಂದಾಜಿಸಲು ಆಳವಾದ ತನಿಖೆ ಕಡ್ಡಾಯವಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

