ಬೆಂಗಳೂರು: ರೇಷನ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಕಾಲಾವಕಾಶ ನೀಡಿದ್ದು, ಪಡಿತರ ಚೀಟಿ ಇ-ಕೆವೈಸಿ (e-KYC) ದೃಢೀಕರಣದ ಅಂತಿಮ ದಿನಾಂಕವನ್ನು ನವೆಂಬರ್ 10ರವರೆಗೆ ವಿಸ್ತರಿಸಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ.
ಈ ಹಿಂದೆ ಅಕ್ಟೋಬರ್ 20 ಕೊನೆಯ ದಿನವಾಗಿತ್ತು. ಒಂದು ವರ್ಷಕ್ಕೂ ಹೆಚ್ಚು ಕಾಲದ ಹಿಂದೆ ಇ-ಕೆವೈಸಿ ಮಾಡಿಸಿದ ಸುಮಾರು 1,15,87,298 ಫಲಾನುಭವಿಗಳು ಮತ್ತೊಮ್ಮೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನುಳಿದಂತೆ, ಇದುವರೆಗೆ ಒಂದೇ ಒಂದು ಬಾರಿಯೂ ಇ-ಕೆವೈಸಿ ಮಾಡಿಸದ 3,82,362 ಜನ ಹಾಗೂ ಐದು ವರ್ಷಗಳಿಗೂ ಹೆಚ್ಚು ಹಳೆಯದಾದ ಇ-ಕೆವೈಸಿ ಹೊಂದಿರುವ 54,27,396 ಫಲಾನುಭವಿಗಳು ಕೂಡ ಕೂಡಲೇ ಇದನ್ನು ನವೀಕರಿಸಿಕೊಳ್ಳಬೇಕಿದೆ.
ಬಾಕಿ ಇರುವ ಎಲ್ಲರೂ ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಮೂಲಕ ಸ್ವತಃ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ‘AHARA’ ತಂತ್ರಾಂಶ ಬಳಸಿ ನವೆಂಬರ್ 10ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎಂದು ಇಲಾಖೆ ಎಚ್ಚರಿಸಿದೆ.
ಸೆಪ್ಟೆಂಬರ್ 30ರಷ್ಟೇ ಮುಗಿಯಬೇಕಿದ್ದ ಈ ಗಡುವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮೊದಲು ಅಕ್ಟೋಬರ್ 20ಕ್ಕೆ ಮತ್ತು ಈಗ ನವೆಂಬರ್ 10ಕ್ಕೆ ವಿಸ್ತರಿಸಲಾಗಿದೆ. ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಚಿತ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವುದಲ್ಲದೆ, ರೇಷನ್ ಕಾರ್ಡ್ ಕೂಡ ರದ್ದಾಗುವ ಸಾಧ್ಯತೆಯಿದೆ.

