ನವದೆಹಲಿ: ಸ್ಕಾಟ್ಲ್ಯಾಂಡ್ನ ಗ್ಲಾಸ್ಕೋ ನಗರದಲ್ಲಿ ನಿನ್ನೆಯಷ್ಟೇ 2026 ನೇ ಸಾಲಿನ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ದೊರೆತಿದೆ.
ಈ ಕ್ರೀಡಾಕೂಟದ ಪ್ರಥಮ ದಿನವೇ ಭಾರತದ ಮುಡಿಗೆ ಪದಕದ ಗರಿ ಏರಿದೆ. ಪುರುಷರ ವಿಭಾಗದ ಹೆವಿ ವೈಟ್ ಪ್ಯಾರಾ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಕ್ರೀಡಾಪಟು ಪೊಲಿಯೋ ಪೀಡಿತ ಝಂದು ಕುಮಾರ್ ಅವರು ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಆ ಮೂಲಕ ಜಾಗತಿಕ ಕ್ರೀಡಾಕೂಟದಲ್ಲಿ ಭಾರತ ಪದಕಗಳ ಖಾತೆಯನ್ನು ತೆರೆದಿದೆ.
ಝಂದು ಕುಮಾರ್ ಅವರು ದೈಹಿಕ ವೈಕಲ್ಯತೆಗೆ ಸವಾಲೊಡ್ಡಿ ತಮ್ಮ ಕಠಿಣ ಪರಿಶ್ರಮದ ಮೂಲಕ ವಿಶ್ವ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.
ಮೊದಲ ಸುತ್ತಿನಲ್ಲಿ ಅವರು 181 ಕೆ.ಜಿ. ಮತ್ತು ಎರಡನೇ ಸುತ್ತಿನಲ್ಲಿ 190 ಕೆ.ಜಿ. ಭಾರವನ್ನು ಎತ್ತುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೂರನೇ ಪ್ರಯತ್ನದಲ್ಲಿ 196 ಕೆ.ಜಿ. ತೂಕ ಎತ್ತುವಲ್ಲಿ ಅವರು ವಿಫಲರಾದ ಕಾರಣ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.
ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ನೈಜೀರಿಯಾಕ್ಕೆ ಮತ್ತು ಬೆಳ್ಳಿ ಪದಕ ಬ್ರಿಟನ್ಗೆ ಲಭಿಸಿದೆ.

