ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಕನ್ನಡ ಬಿಗ್ ಬಾಸ್’ (Bigg Boss Kannada) ಪ್ರೇಕ್ಷಕರಿಗೆ ಸಂಬಂಧಿಸಿದಂತೆ ಒಂದು ಭರ್ಜರಿ ಅಪ್ಡೇಟ್ ಹೊರಬಿದ್ದಿದೆ. ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ, ಕನ್ನಡಿಗರ ನೆಚ್ಚಿನ ಈ ಶೋ ಈ ಬಾರಿ ಅಂದುಕೊಂಡ ದಿನಾಂಕಕ್ಕಿಂತ ಮುಂಚಿತವಾಗಿಯೇ ಆರಂಭಗೊಳ್ಳುವ ಸಾಧ್ಯತೆ ಇದೆ.ಮೊದಲ ಪ್ರೋಮೋ ರಿಲೀಸ್ ಮಾಡಿದ ‘ಕಲರ್ಸ್ ಕನ್ನಡ’ವಾಹಿನಿಯು ‘ಬಿಗ್ ಬಾಸ್ ಸೀಸನ್ 12’ (BBK13) ರ ಮೊದಲ ಪ್ರೋಮೋವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಅನಿಮೇಷನ್ ಪ್ರೋಮೋದಲ್ಲಿ ಅನೇಕ ಜನರು ನಡೆದುಕೊಂಡು ಬರುತ್ತಿರುವುದನ್ನು ತೋರಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗುತ್ತಿದ್ದ ಬಿಗ್ ಬಾಸ್, ಈ ಬಾರಿ ಅತ್ಯಂತ ಬೇಗನೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಈ ಬಾರಿ ಮನೆಗೆ ಸಾಮಾನ್ಯರೇ ಸೆಲೆಬ್ರಿಟಿಗಳು?
ಬಿಡುಗಡೆಯಾಗಿರುವ ಪ್ರೋಮೋ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸ್ಪರ್ಧಿಗಳ ವಿಚಾರದಲ್ಲಿ ಈ ಬಾರಿ ದೊಡ್ಡ ಬದಲಾವಣೆಯೊಂದು ಆಗುವ ಮುನ್ಸೂಚನೆ ಸಿಕ್ಕಿದೆ. ಸೆಲೆಬ್ರಿಟಿಗಳನ್ನು ಹೊರತುಪಡಿಸಿ, ಸಾಮಾನ್ಯ ಜನರಿಗೂ ಈ ಬಾರಿ ಮನೆಯೊಳಗೆ ಪ್ರವೇಶಿಸಲು ಹೆಚ್ಚಿನ ಅವಕಾಶ ಇರಬಹುದೇ? ಎನ್ನುವ ದೊಡ್ಡ ಪ್ರಶ್ನೆ ಮತ್ತು ಕುತೂಹಲವನ್ನು ಈ ಪ್ರೋಮೋ ಪ್ರೇಕ್ಷಕರಲ್ಲಿ ಹುಟ್ಟುಹಾಕಿದೆ.
ಕಳೆದ 12 ಸೀಸನ್ಗಳಿಂದ ಸತತವಾಗಿ ಕನ್ನಡಿಗರ ಮನ ಗೆಲ್ಲುತ್ತಾ ಬಂದಿರುವ ಬಿಗ್ ಬಾಸ್, ಈ ಹೊಸ ಸೀಸನ್ ಮೂಲಕ ಮತ್ತಷ್ಟು ಹೊಸತನ ಹಾಗೂ ಟ್ವಿಸ್ಟ್ಗಳೊಂದಿಗೆ ಧೂಳೆಬ್ಬಿಸಲು ಸಿದ್ಧವಾಗುತ್ತಿದೆ. ಮುಂಚಿತವಾಗಿ ಆರಂಭವಾಗಲಿರುವ ಈ ಶೋ ಬಗ್ಗೆ ಪ್ರೇಕ್ಷಕರಲ್ಲಿ ಈಗಾಗಲೇ ನಿರೀಕ್ಷೆಗಳು ಗಗನಕ್ಕೇರಿವೆ.

