ಉಡುಪಿ: ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವದ ಸಂಭ್ರಮ ಹಾಗೂ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ. 24ರಂದು ಸಂಜೆ 4.30ಕ್ಕೆ ಉಡುಪಿಯ ಜೋಡುಕಟ್ಟೆಯ ಆಶ್ರಯ ಟವರ್ಸ್ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಹಿರಿಯ ಸಹಕಾರಿ ಶಂಭು ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ ಎಂದು ತಿಳಿಸಿದರು.
2000ನೇ ಇಸವಿಯಲ್ಲಿ ಶಿವಪಾಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಎಂಬ ಹೆಸರಿನಲ್ಲಿ ಆರಂಭಗೊಂಡ ಸಂಸ್ಥೆ, ಬಳಿಕ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಎಂದು ಮರುನಾಮಕರಣಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದೀಗ 25 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿರುವ ಸಂಘವು, ಸ್ವಂತ ಹವಾನಿಯಂತ್ರಿತ ಕಟ್ಟಡದಲ್ಲಿ ಪ್ರಧಾನ ಕಚೇರಿ ಆರಂಭಿಸುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದರು.
ಸಂಘವು ಆರಂಭದ ಎರಡು ವರ್ಷಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿತ್ತು. ಈ ಸಂದರ್ಭದಲ್ಲಿ ಪೇಜಾವರ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಹಿರಿಯ ಸಹಕಾರಿ ಶಂಭು ಶೆಟ್ಟಿಯವರ ನಿರ್ದೇಶನದಂತೆ ಹೊಸ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಬಳಿಕ ಅಧ್ಯಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘವನ್ನು ಮುನ್ನಡೆಸಿದ ಹಿನ್ನೆಲೆಯಲ್ಲಿ, ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹೆಸರಿನಲ್ಲಿ ಸಂಸ್ಥೆ ಪ್ರಗತಿಯ ಹಾದಿಯಲ್ಲಿ ಸಾಗಲು ಸಾಧ್ಯವಾಯಿತು ಎಂದು ಕೆ. ರಘುಪತಿ ಭಟ್ ವಿವರಿಸಿದರು.
ಸಂಘವು ನಿರಂತರವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಪ್ರತಿ ವರ್ಷ ಶೇ. 12ರಷ್ಟು ಲಾಭಾಂಶವನ್ನು ವಿತರಿಸುತ್ತಿದೆ. ಸದಸ್ಯರ ಆರ್ಥಿಕ ಹಿತಾಸಕ್ತಿ ಹಾಗೂ ವಿಶ್ವಾಸಕ್ಕೆ ಆದ್ಯತೆ ನೀಡುತ್ತಿರುವ ಸಂಸ್ಥೆಯಲ್ಲಿ ಪ್ರಸ್ತುತ ಸುಮಾರು 2,000 ಸದಸ್ಯರಿದ್ದಾರೆ. ಸುಮಾರು ₹50 ಕೋಟಿ ಠೇವಣಿ ಸಂಗ್ರಹವಾಗಿದ್ದು, ವಾರ್ಷಿಕ ₹125 ಕೋಟಿ ವಹಿವಾಟು ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ಪ್ರಧಾನ ಕಚೇರಿಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು ಎಂಬುದು ಆರಂಭದಿಂದಲೂ ಹೊಂದಿದ್ದ ಕನಸಾಗಿತ್ತು. ಹಲವು ವರ್ಷಗಳ ಪರಿಶ್ರಮ, ಸದಸ್ಯರ ಸಹಕಾರ ಹಾಗೂ ಆಡಳಿತ ಮಂಡಳಿಯ ದೂರದೃಷ್ಟಿಯಿಂದ ಈ ಕನಸು ನನಸಾಗಿದೆ. ನೂತನ ಕಚೇರಿಯು ಸಂಘದ ಮುಂದಿನ ಬೆಳವಣಿಗೆಗೆ ಪ್ರೇರಣೆ ನೀಡುವುದರ ಜೊತೆಗೆ ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಸುರೇಶ್ ಪ್ರಭು, ಗಣೇಶ್ ಕುಮಾರ್, ಅವಿನಾಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತಾ ಪ್ರವೀಣ್ ಉಪಸ್ಥಿತರಿದ್ದರು.

