ಉಡುಪಿಯ ಎಸ್ಜಿಆರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಆಸ್ತಿಯ ನಕಲಿ ದಾಖಲೆಗಳನ್ನು ನೀಡಿ ಒಟ್ಟು 1,00,00,500 ರೂ. ಸಾಲ ಪಡೆದು ವಂಚಿಸಿರುವ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತರಾದ ಯು. ಅಭಿಷೇಕ್ ಹಾಗೂ ರಮಾ ಜೆ. ರಾವ್ ಅವರು ಆಸ್ತಿಗೆ ಸಂಬಂಧಿಸಿದ ಕ್ರಯಸಾಧನ ಹಾಗೂ ಅಡಮಾನ ದಾಖಲೆಗಳನ್ನು ಸಲ್ಲಿಸಿ ಒಟ್ಟು 1.60 ಕೋಟಿ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಕಳೆದ ಸೆಪ್ಟೆಂಬರ್ 17ರಂದು ಬ್ರಹ್ಮಾವರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿದ್ದವು.
ನೋಂದಣಿಯಾದ ಕಾಗದಪತ್ರಗಳನ್ನು ಮೂಲ ದಾಖಲೆಗಳೆಂದು ನಂಬಿದ ಸೊಸೈಟಿಯು ಆರೋಪಿತರಿಗೆ ಒಟ್ಟು 1,00,00,500 ರೂ. ಮೊತ್ತವನ್ನು ಬಿಡುಗಡೆ ಮಾಡಿತ್ತು. ಬಳಿಕ, ಸದರಿ ಆಸ್ತಿಗೆ ಸಂಬಂಧಿಸಿದ ಮೊಹಮ್ಮದ್ ಶಾಕೀರ್ ಅವರು ದಾಖಲೆಗಳ ಸತ್ಯಾಸತ್ಯತೆ ಹಾಗೂ ತಮ್ಮ ಸಹಿ ಸೇರಿದಂತೆ ಇತರೆ ದಾಖಲೆಗಳ ದುರುಪಯೋಗವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ಅಸಲಿ ಎಂದು ನಂಬಿಸಿ ವಂಚನೆ ಎಸಗಿರುವ ಬಗ್ಗೆ ಸತ್ಯಾಸತ್ಯತೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೊಸೈಟಿಯ ವತಿಯಿಂದ ದೂರು ನೀಡಲಾಗಿದೆ. ಈ ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 196/2026 ರಡಿ ಬಿಎನ್ಎಸ್ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

