ಕುಂದಾಪುರ: ನಿರ್ಮಾಣ ಹಂತದ ದೇವಸ್ಥಾನದಲ್ಲಿ ಶಿಲ್ಪಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ವಂಡ್ಸೆ ಗ್ರಾಮದ ಕಂಬಳಗದ್ದೆ ಬಳಿ ನಡೆದಿದೆ.
ಕಾರ್ಕಳ ತಾಲೂಕಿನ ಕುಕ್ಕಂದೂರು ಗ್ರಾಮದ ನಿವಾಸಿ ಶಿವ ಅವರ ಮಗ ಶರತ್ ಕುಮಾರ್ (30) ಮೃತಪಟ್ಟ ದುರ್ದೈವಿ. ಕಳೆದ ಒಂದು ತಿಂಗಳಿಂದ ಇವರು ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಕಂಬಳಗದ್ದೆ ಬಳಿಯ ದೇವಸ್ಥಾನದಲ್ಲಿ ಶಿಲ್ಪಿ ಕೆಲಸ ಮಾಡಿಕೊಂಡಿದ್ದರು.
ಅಕ್ಟೋಬರ್ 16 ರಂದು ಸಂಜೆ ಸುಮಾರು 4:30 ಗಂಟೆಯ ವೇಳೆಗೆ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಅವರ ಹಣೆಗೆ ಹಾಗೂ ಎಡ ಭುಜಕ್ಕೆ ಒಳಜಖಂ ಆಗಿದ್ದು, ದೇಹದ ಇತರೆ ಅಂಗಾಂಗಗಳಿಗೂ ಗಂಭೀರ ಪೆಟ್ಟಾಗಿತ್ತು.
ತಕ್ಷಣ ಅವರನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂದೇ ರಾತ್ರಿ ಸುಮಾರು 8:45 ಗಂಟೆಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 20/2026 ಕಲಂ 194 ಬಿಎನ್ಎಸ್ಎಸ್ (BNSS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

