ಬೆಂಗಳೂರು: ರಾಜ್ಯದಲ್ಲಿ ಮನೆಮನೆಗೆ ತೆರಳಿ ನಡೆಸಲಾಗುತ್ತಿರುವ ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಗಳ ಪರಿಶೀಲನಾ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಗ್ರಾಹಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸಮೀಕ್ಷೆಯ ವೇಳೆ ಮನೆಗೆ ಬೀಗ ಹಾಕಿದ್ದ ಕಾರಣದಿಂದ ಹಾಗೂ ಖಾಲಿ ಮನೆಗಳಿದ್ದ ಕಾರಣದಿಂದ ಪರಿಶೀಲನೆಗೆ ಒಳಪಡದ ಅರ್ಹ ಫಲಾನುಭವಿಗಳು ಅಕ್ಟೋಬರ್ 31ರೊಳಗೆ ತಮ್ಮ ಸಮೀಪದ ವಿದ್ಯುತ್ ಸರಬರಾಜು ಕಂಪನಿಯ (ಎಸ್ಕಾಂ) ಉಪವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಸಮೀಕ್ಷೆಯ ಸಂದರ್ಭದಲ್ಲಿ ಗ್ರಾಹಕರು ಸ್ಥಳದಲ್ಲಿ ಲಭ್ಯವಿಲ್ಲದ ಕಾರಣಕ್ಕೆ ಯಾವೊಬ್ಬ ಅರ್ಹ ಫಲಾನುಭವಿಯೂ ಉಚಿತ ವಿದ್ಯುತ್ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉನ್ನತ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಭಾಗ್ಯಜ್ಯೋತಿ, ಕುಟೀರಜ್ಯೋತಿ ಹಾಗೂ ಅಮೃತಜ್ಯೋತಿ ಯೋಜನೆಗಳ ಫಲಾನುಭವಿಗಳನ್ನು ಒಳಗೊಂಡಂತೆ ಒಟ್ಟು 74.29 ಲಕ್ಷಕ್ಕೂ ಹೆಚ್ಚು ಗೃಹಜ್ಯೋತಿ ಗ್ರಾಹಕರಿದ್ದಾರೆ. ಈ ಪೈಕಿ ಇದುವರೆಗೆ ಸುಮಾರು 72.40 ಲಕ್ಷಕ್ಕೂ ಅಧಿಕ (ಶೇ. 97.5) ಫಲಾನುಭವಿಗಳ ಪರಿಶೀಲನಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಆದಾಗ್ಯೂ, ಸಮೀಕ್ಷೆ ವೇಳೆ ರಾಜ್ಯಾದ್ಯಂತ ಸುಮಾರು 16.1 ಲಕ್ಷ ಮನೆಗಳು ಬೀಗ ಹಾಕಲ್ಪಟ್ಟಿದ್ದು, 28,519 ಮನೆಗಳು ಖಾಲಿಯಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಮಾಡಿದ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ, ಅಂತಹ ಗ್ರಾಹಕರಿಗೆ ದಾಖಲೆ ಸಲ್ಲಿಸಲು ಅಕ್ಟೋಬರ್ 31ರವರೆಗೆ ಕೊನೆಯ ಅವಕಾಶ ನೀಡಿದೆ. ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲು ನಿಗದಿತ ದಿನಾಂಕದೊಳಗೆ ಸಂಬಂಧಪಟ್ಟ ಉಪವಿಭಾಗ ಕಚೇರಿಗೆ ತೆರಳಿ ಪರಿಶೀಲನೆ ಪೂರ್ಣಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

