ಉಡುಪಿ: ಹಲ್ಲುನೋವು ಉಲ್ಬಣಗೊಂಡು ಅದನ್ನು ಸಹಿಸಲಾರದೆ ಮೆಸ್ಕಾಂ ಉದ್ಯೋಗಿಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಮೆಸ್ಕಾಂನ ಅಸಿಸ್ಟೆಂಟ್ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಟಿ.ಪಿ ಸಿದ್ಧಲಿಂಗಯ್ಯ ಮೃತ ದುರ್ದೈವಿ.
ಇವರು ಕುಂಜಿಬೆಟ್ಟುವಿನ ಮೆಸ್ಕಾಂ ಕ್ವಾಟ್ರಸ್ ನಲ್ಲಿ ವಾಸವಾಗಿದ್ದರು. ಇವರು ಮಗನಿಗೆ ಕರೆ ಮಾಡಿ ವಿಪರೀತ ಹಲ್ಲುನೋವಿದ್ದು ಜ್ವರ ಬಂದಿದೆ. ಮಲಗಿದ್ರೂ ನಿದ್ದೆ ಬರ್ತಿಲ್ಲ. ಸಹಿಸಲು ಆಗ್ತಾ ಇಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ.
ಈ ಸಂದರ್ಭ ಮನೆಯಲ್ಲಿ ಅವರ ಹೆಂಡತಿ, ಮಕ್ಕಳು ಮೈಸೂರಿಗೆ ಹೋಗಿದ್ದರು. ವಿಷಯ ತಿಳಿದು ಪತ್ನಿ ಎಷ್ಟು ಬಾರಿ ಕಾಲ್ ಮಾಡಿದರೂ ನಂತರ ರಿಸೀವ್ ಮಾಡಿಲ್ಲ. ಪರಿಚಯಸ್ಥರಿಗೆ ತಿಳಿಸಿ ಅವರು ಪೊಲೀಸರ ಜೊತೆ ಹೋಗಿ ನೋಡಿದಾಗ ಸಿದ್ಧಲಿಂಗಯ್ಯ ಮೃತಪಟ್ಟಿದ್ದರು.
ವಿಪರೀತ ಹಲ್ಲು ನೋವು ಅಥವಾ ಇತರ ಆರೋಗ್ಯ ಸಮಸ್ಯೆಯಿಂದ ಇವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

