ಬೆಂಗಳೂರು: ಗಡೀಪಾರು ಆದೇಶ ಪ್ರಶ್ನಿಸಿ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಗಡೀಪಾರು ಆದೇಶ ಪ್ರಶ್ನಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರ ಅರ್ಜಿ ವಜಾಗೊಳಿಸಿ, ಗಡೀಪಾರು ಪ್ರಶ್ನಿಸಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು. ಹೀಗಾಗಿ ರಿಟ್ ಅರ್ಜಿ ಊರ್ಜಿತವಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ ಗಡೀಪಾರು ಸಂಬಂಧ 2 ವಾರ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ಧ ಕೃತಕ ಬುದ್ದಿಮತ್ತೆ (ಎಐ) ಬಳಕೆ ಮಾಡಿ ಮಾನಹಾನಿ ಉಂಟು ಮಾಡುವ ಫೋಟೊ ಮತ್ತು ಕಂಟೆಂಟ್ ಸೃಷ್ಟಿಸಿ ಹಂಚಿಕೆ ಮಾಡುವುದನ್ನು ನಿರ್ಬಂಧಿಸುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರಕಾರ, ಗೂಗಲ್, ಮೆಟಾ (ಫೇಸ್ಬುಕ್), ವಾಟ್ಸಾಪ್, ಇನ್ಸ್ಟಾಗ್ರಾಂ ವೇದಿಕೆಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

