ಬ್ರಹ್ಮಾವರ: ತಾಲೂಕಿನ ಗ್ರಾಮೀಣ ಪ್ರದೇಶದ ಜನರ ದಶಕಗಳ ಕನಸು ನನಸಾಗಿದೆ. ಉಡುಪಿ- ಬ್ರಹ್ಮಾವರ- ಮಟಪಾಡಿ- ನೀಲಾವರ ಮಾರ್ಗವಾಗಿ ಮಂದಾರ್ತಿಗೆ ಸಂಪರ್ಕ ಕಲ್ಪಿಸುವ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ಸೇವೆಗೆ ಇಂದಿನಿಂದ ಚಾಲನೆ ನೀಡಲಾಗಿದ್ದು, ಈ ಭಾಗದ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಿದೆ.
ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಾಟಕ್ಕೆ ಸ್ಥಳೀಯರು ಒತ್ತಾಯಿಸುತ್ತಿದ್ದರು. ಸ್ಥಳೀಯರ ಹೋರಾಟದಿಂದ ಬ್ರಹ್ಮಾವರ-ಮಟಪಾಡಿ- ನೀಲಾವರದಲ್ಲಿ ಅತ್ಯುತ್ತಮ ಸಂಪರ್ಕ ರಸ್ತೆ ಹೊಂದಿದ್ದರೂ ಖಾಸಗಿ ಬಸ್ಗಳ ಕೊರತೆಯಿಂದಾಗಿ ನೀಲಾವರ, ಮಟಪಾಡಿ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲು ಪರದಾಡಬೇಕಾಗಿತ್ತು. ಅದರಲ್ಲೂ ಬಸ್ ಸಂಪರ್ಕವೇ ಇಲ್ಲದ ಮಟಪಾಡಿ, ತಂತ್ರಾಡಿ ಗ್ರಾಮಸ್ಥರು ಇದೀಗ ಸರ್ಕಾರಿ ಬಸ್ ಆರಂಭವಾಗಿರುವುದು ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮಾರ್ಗ: ಉಡುಪಿ-ಬ್ರಹ್ಮಾವರ – ಮಟಪಾಡಿ– ನೀಲಾವರ – ಕೂರಾಡಿ -ಮಂದಾರ್ತಿ.
ಬಸ್ಸಿನ ವೇಳಾಪಟ್ಟಿ ಇಂತಿದೆ:

ಸೌಲಭ್ಯ
ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ದೊರೆಯಲಿದ್ದು, ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸಂಚಾರ ಲಭ್ಯವಿರುತ್ತದೆ.
ಜನರ ಸಂಕಷ್ಟಕ್ಕೆ ಶಾಸಕರ ಸ್ಪಂದನೆ:
ಸರ್ಕಾರಿ ಬಸ್ ಸೇವೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಯಶ್ಪಾಲ್ ಸುವರ್ಣ “ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ಬಸ್ ಸೌಲಭ್ಯವಿಲ್ಲದೆ ಪಡುತ್ತಿದ್ದ ತೊಂದರೆ ನನ್ನ ಗಮನಕ್ಕೆ ಬಂದಿತ್ತು. ಈ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಾಟಕ್ಕೆ ಇದ್ದ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ, ಈಗ ಬಸ್ ಸಂಚಾರ ಆರಂಭಿಸಲಾಗಿದೆ. ಇದು ಈ ಭಾಗದ ಶೈಕ್ಷಣಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಬಲ ನೀಡಲಿದೆ,” ಎಂದು ತಿಳಿಸಿದರು.
ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಪೂರಕ:
ನೀಲಾವರ ದೇವಸ್ಥಾನ ಹಾಗೂ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೂ ಈ ಬಸ್ ಸೇವೆ ವರದಾನವಾಗಲಿದೆ. ಗ್ರಾಮೀಣ ಭಾಗದ ಮೂಲಸೌಕರ್ಯ ವೃದ್ಧಿಸುವಲ್ಲಿ ಈ ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಸರ್ಕಾರಿ ಬಸ್ ಸೇವೆಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ ಸ್ಥಳೀಯ ನೀಲಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಕೇವಲ ಖಾಸಗಿ ವಾಹನಗಳನ್ನೇ ನೆಚ್ಚಿಕೊಂಡಿದ್ದ ಈ ಭಾಗದ ಜನರಿಗೆ ಈಗ ಸರ್ಕಾರಿ ಸಾರಿಗೆಯ ಸುಲಭ ಮತ್ತು ಸುರಕ್ಷಿತ ಪ್ರಯಾಣದ ಸೌಲಭ್ಯ ಸಿಕ್ಕಂತಾಗಿದೆ.

