ಬೆಂಗಳೂರು: ಶಾಲಾ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜಾರಿಗೆ ತಂದಿರುವ ‘ಸಂಭ್ರಮ ಶನಿವಾರ’ (ಬ್ಯಾಗ್ರಹಿತ ದಿನ) ಕಾರ್ಯಕ್ರಮವು ಈ ಸಾಲಿನಲ್ಲೂ ಮುಂದುವರಿಯಲಿದೆ.
ಮಕ್ಕಳಲ್ಲಿ ಪಠ್ಯದ ಹೊರತಾದ ಕೌಶಲಗಳು, ಕಲೆ, ಪರಿಸರ ಜಾಗೃತಿ, ಸಾಮಾಜಿಕ ಮೌಲ್ಯ ಮತ್ತು ನಾಗರಿಕ ಪ್ರಜ್ಞೆಯನ್ನು ಬೆಳೆಸಲು ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ‘ಸಂಭ್ರಮ ಶನಿವಾರ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮದಡಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ)ಯು ಪ್ರತಿಯೊಂದು ತಿಂಗಳಿಗೂ ನಿಗದಿಪಡಿಸಿದ ನಿರ್ದಿಷ್ಟ ವಿಷಯಗಳ ಆಧಾರದ ಮೇಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವೈವಿಧ್ಯಮಯ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ.
ಮಾಸಿಕ ವಿಷಯಗಳ ವಿವರ ಹೀಗಿದೆ:
- ಜೂನ್: ವಿಶೇಷ ಚೇತನ ವ್ಯಕ್ತಿಗಳೊಂದಿಗೆ ಸಂವಹನ
- ಜುಲೈ: ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ
- ಆಗಸ್ಟ್: ಮಾಧ್ಯಮ ಮತ್ತು ಅಂತರ್ಜಾಲದ ಬಳಕೆ
- ಸೆಪ್ಟೆಂಬರ್: ಪೌಷ್ಟಿಕತೆ, ಸ್ವಾಸ್ಥ್ಯ ಮತ್ತು ನೈರ್ಮಲೀಕರಣ
- ಅಕ್ಟೋಬರ್: ಸಾರ್ವಜನಿಕ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ
- ನವೆಂಬರ್: ಆರೋಗ್ಯಕರ ಜೀವನಶೈಲಿ
- ಡಿಸೆಂಬರ್: ಸಾರ್ವಜನಿಕ ಸೌಕರ್ಯಗಳು ಮತ್ತು ನನ್ನ ಜವಾಬ್ದಾರಿ
- ಜನವರಿ: ರಸ್ತೆ ಸುರಕ್ಷತೆ
- ಫೆಬ್ರವರಿ: ರಸ್ತೆ, ಅಪರಾಧ, ಅಪಘಾತಗಳ ಸಂದರ್ಭಗಳಲ್ಲಿ ರಕ್ಷಣೆ ಹಾಗೂ ಭದ್ರತೆ
- ಮಾರ್ಚ್: ಲಿಂಗ ಸಮಾನತೆಗೆ ಪ್ರೋತ್ಸಾಹ
ಈ ಮೇಲಿನ ವಿಷಯಗಳ ಆಧಾರದ ಮೇಲೆ ಆಯಾ ತಿಂಗಳ ಮೂರನೇ ಶನಿವಾರದಂದು ಶಾಲೆಗಳಲ್ಲಿ ವಿಶೇಷ ಚಟುವಟಿಕೆಗಳು ಹಾಗೂ ಸಂಭ್ರಮದ ಕಲಿಕಾ ಪ್ರಕ್ರಿಯೆಗಳು ನಡೆಯಲಿವೆ.

