ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಹೈಡ್ರಾಮಾ ಶುರುವಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಕ್ಷದ ಪ್ರಮುಖ ಲೋಕಸಭಾ ಸಂಸದರ ಫೋನ್ಗಳು ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗಿದ್ದು, ಪಕ್ಷದ ಹಿರಿಯ ನಾಯಕರಿಗೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಆಂತರಿಕ ಭಿನ್ನಾಭಿಪ್ರಾಯದ ಬೆನ್ನಲ್ಲೇ, ಮಹಾರಾಷ್ಟ್ರ ರಾಜಕೀಯದ ಇಡೀ ಚಿತ್ತ ಈಗ ಮುಂಬೈನಿಂದ ದೆಹಲಿಯತ್ತ ನೆಟ್ಟಿದೆ.
ಶಿಂಧೆ ಬಣದ ಜೊತೆ ವಿಲೀನಕ್ಕೆ ಸಿದ್ಧತೆ?
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಉದ್ಧವ್ ಬಣದ ಆರು ಪ್ರಮುಖ ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಮತ್ತೊಬ್ಬ ಸಂಸದ ರಾಜಭಾವು ವಾಜೆ ಕೂಡ ಇವರನ್ನು ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಈ ಭಿನ್ನಮತೀಯ ಸಂಸದರು ದೆಹಲಿಯಲ್ಲಿರುವ ಶ್ರೀಕಾಂತ್ ಶಿಂಧೆ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ. ತದನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ಪ್ರತ್ಯೇಕ ಬಣ ರಚಿಸುವ ಕಾನೂನು ಪ್ರಕ್ರಿಯೆ ಮುಗಿಸಿ ಶಿಂಧೆ ನೇತೃತ್ವದ ಶಿವಸೇನೆಯಲ್ಲಿ ಅಧಿಕೃತವಾಗಿ ವಿಲೀನಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ತಲಾ 15 ಕೋಟಿ ರೂ. ಆಮಿಷ: ಸಂಜಯ್ ರಾವತ್ ಗಂಭೀರ ಆರೋಪ
ಈ ದಿಢೀರ್ ಬೆಳವಣಿಗೆಗಳ ಬೆನ್ನಲ್ಲೇ ದೆಹಲಿಗೆ ಧಾವಿಸಿರುವ ಉದ್ಧವ್ ಬಣದ ಹಿರಿಯ ನಾಯಕ ಸಂಜಯ್ ರಾವತ್, ಆಡಳಿತ ಪಕ್ಷದ ವಿರುದ್ಧ ಗಂಭೀರ ಹಣದ ಆಮಿಷದ ಆರೋಪ ಮಾಡಿದ್ದಾರೆ. “ಮಹಾರಾಷ್ಟ್ರದ ಸಂಸದರನ್ನು ಖರೀದಿಸಲು ತಲಾ 15 ಕೋಟಿ ರೂ. ಹಣ ನೀಡಲಾಗುತ್ತಿದೆ. ಈ ಆಪರೇಷನ್ ಮಾಹಿತಿ ಅತ್ಯಂತ ಆಘಾತಕಾರಿಯಾಗಿದೆ,” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಪಕ್ಷ ಒಡೆಯುವ ವದಂತಿಗಳನ್ನು ತಳ್ಳಿಹಾಕಿರುವ ರಾವತ್, ಯಾವುದೇ ಸವಾಲನ್ನು ಎದುರಿಸಲು ತಮ್ಮ 60 ವರ್ಷಗಳ ಇತಿಹಾಸವಿರುವ ಸಂಘಟನೆ ಸಿದ್ಧವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉದ್ಧವ್ ಸಭೆಗೆ ಗೈರಾಗಿದ್ದೇ ಅನುಮಾನಕ್ಕೆ ಕಾರಣ!
ಕಳೆದ ಭಾನುವಾರ ಉದ್ಧವ್ ಠಾಕ್ರೆ ಅವರು ಮುಂಬೈನಲ್ಲಿ ಕರೆದಿದ್ದ ಪ್ರಮುಖ ಸಭೆಗೆ ಒಟ್ಟು 9 ಲೋಕಸಭಾ ಸಂಸದರ ಪೈಕಿ ಕೇವಲ ನಾಲ್ವರು ಮಾತ್ರ ಖುದ್ದಾಗಿ ಹಾಜರಾಗಿದ್ದರು. ಉಳಿದ ಐವರು ಸಂಸದರು ವೈಯಕ್ತಿಕ ಕಾರಣ ನೀಡಿ ಕೇವಲ ಫೋನ್ ಅಥವಾ ಆನ್ಲೈನ್ ಮೂಲಕ ಭಾಗವಹಿಸಿದ್ದರು. ಅದರಲ್ಲಿಯೂ ಸಂಸದ ಸಂಜಯ್ ದೇಶಮುಖ್ ಅವರು ಉದ್ಧವ್ ಸಭೆಯನ್ನು ತಪ್ಪಿಸಿಕೊಂಡು, ದೆಹಲಿಯಲ್ಲಿ ಕೇಂದ್ರ ಸಚಿವ ಪ್ರತಾಪರಾವ್ ಜಾಧವ್ ಅವರನ್ನು ಭೇಟಿ ಮಾಡಿದ್ದು ಈ ಎಲ್ಲಾ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ನಮ್ಮ ಬಾಗಿಲು ಮುಕ್ತವಾಗಿದೆ ಎಂದ ಶಿಂಧೆ ಬಣ: ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಪ್ರಮುಖ ನಾಯಕ ಪ್ರತಾಪ್ ಸರ್ನಾಯಕ್, “ಯಾವ ಜನಪ್ರತಿನಿಧಿಗಳಿಗೆ ಉದ್ಧವ್ ನಾಯಕತ್ವದ ಮೇಲೆ ನಂಬಿಕೆ ಇಲ್ಲವೋ ಮತ್ತು ಯಾರು ಬಾಳಾ ಸಾಹೇಬ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಅವರ ಆದರ್ಶಗಳನ್ನು ನಂಬುತ್ತಾರೋ, ಅಂತಹವರಿಗೆ ನಮ್ಮ ಶಿವಸೇನೆಯ ಬಾಗಿಲುಗಳು ಯಾವಾಗಲೂ ಮುಕ್ತವಾಗಿರುತ್ತವೆ,” ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

