ಭಾರತ ಸ್ವಾತಂತ್ರ್ಯ ರಾಷ್ಟ್ರವಾಗಿ ಗುರುತಿಸಿಕೊಳ್ಳುವ ಮುನ್ನವೇ ರಾಷ್ಟ್ರೀಯತೆಯ ಚಿಂತನೆಯ ತಳಹದಿಯಲ್ಲಿ ಸ್ಥಾಪನೆಗೊಂಡು
ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿಯ ಬಗ್ಗೆ ಪ್ರಶ್ನೆ ಮಾಡುವ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಇಸ್ಲಾಮಿಕ್ ಮತೀಯವಾದಿ ಉದ್ದೇಶದಿಂದ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಸಂಘಟನೆಗಳನ್ನು ಪ್ರಶ್ನಿಸುವ ಧೈರ್ಯ ಇದೆಯೇ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಎಸ್.ಎಸ್ ಸ್ಥಾಪನೆಯಾಗಿ ಕಳೆದ ನೂರು ವರ್ಷಗಳಲ್ಲಿ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು, ತುರ್ತು ಪರಿಸ್ಥಿತಿಯ ಸಂದರ್ಭ ಹಾಗೂ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಜೀವದ ಹಂಗು ತೊರೆದು ಆರ್ ಎಸ್ ಎಸ್ ನ ಲಕ್ಷಾಂತರ ಕಾರ್ಯಕರ್ತರು ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಮಹಾ ಸಂಕಲ್ಪದೊಂದಿಗೆ ಸಾಗುತ್ತಿರುವ ದೇಶಭಕ್ತ ಸಂಘಟನೆಯಾಗಿದ್ದು, ಇಂತಹ ಸಂಘಟನೆಯ ಘನಗತೆಗೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯತೆ ವಿರೋಧಿ ನಿಲುವನ್ನು ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರೀಯತೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವೈಖರಿಯನ್ನು ವಿಶ್ವದ ಹಲವು ರಾಷ್ಟ್ರಗಳೇ ಮೆಚ್ಚಿಕೊಂಡಿದೆ. ದೇಶ ಸೇವೆಗಾಗಿ ಸ್ವಾರ್ಥ ರಹಿತ ವ್ಯಕ್ತಿಗಳನ್ನು ರೂಪಿಸುವ ಸಂಸ್ಥೆಯನ್ನು ಕಾಂಗ್ರೆಸ್ ಪಕ್ಷದ ಸಚಿವರೇ ಟೀಕಿಸಲು ಮುಂದಾಗಿರುವುದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯತೆ ಹಾಗೂ ಹಿಂದೂ ವಿರೋಧಿ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಆರ್. ಎಸ್. ಎಸ್. ಕಾರ್ಯವೈಖರಿ, ಸಾಮಾಜಿಕ ಬದ್ಧತೆಯ ಬಗ್ಗೆ ಸಮಾಜದಲ್ಲಿ ಅನುಮಾನ ಮೂಡಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಮತೀಯವಾದಿ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಓಲೈಕೆ ಮಾಡಲು ರಾಜ್ಯದ ಗೃಹ ಸಚಿವರೇ ಮುಂದಾಗಿರುವುದು ದುರದೃಷ್ಟಕರ.
ರಾಷ್ಟ್ರೀಯತೆ ಹಾಗೂ ದೇಶ ಭಕ್ತ ಸಂಘಟನೆಗಳ ಬಗ್ಗೆ ಸದಾ ಕೆಂಗಣ್ಣಿನಿಂದ ನೋಡುವ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನಿಲುವನ್ನು ಪ್ರಿಯಾಂಕ್ ಖರ್ಗೆ ಮುಂದುವರೆಸಿಕೊಂಡು ಬರುತ್ತಿದ್ದು, ಭಯೋತ್ಪಾದನೆ, ಸಮಾಜದಲ್ಲಿ ಅಶಾಂತಿ, ರಾಷ್ಟೀಯ ಆಂತರಿಕ ಭದ್ರತೆಗೆ ಸವಾಲು ಹಾಕಿರುವ ಇಸ್ಲಾಮಿಕ್ ಮತೀಯ ಶಕ್ತಿಗಳು ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಪುರಾವೆಗಳಿದ್ದರೂ ಈವರೆಗೆ ಪ್ರಿಯಾಂಕ್ ಖರ್ಗೆ ಚಕಾರ ಎತ್ತುವ ಧೈರ್ಯ ಮಾಡಿಲ್ಲ.
ರಾಜ್ಯದ ಮೂಲೆ ಮೂಲೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೂರಾರು ಮಸೀದಿ, ಮದರಸಗಳು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣವಾಗುತ್ತಿದ್ದರೂ ಸರ್ಕಾರ ಕೈಕಟ್ಟಿ ಕುಳಿತಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರಕಾರ ಹಿಂದೂ ವಿರೋಧಿ ಹೇಳಿಕೆಗಳ ಮೂಲಕ ಹಿಂದೂ ಸಮಾಜದ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಪ್ರಯತಿಸುತ್ತಿದೆ.
ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯಿಂದ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆಯವರು ಇಂತಹ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ರಾಜ್ಯದ ಜನತೆಯ ದಿಕ್ಕು ತಪ್ಪಿಸಲು ವಿಫಲ ಪ್ರಯತ್ನ ಮಾಡುತ್ತಿದ್ದು, ರಾಜ್ಯದ ರಾಷ್ಟ್ರೀಯವಾದಿ ಚಿಂತನೆಯ ಜಾಗೃತ ಸಮಾಜ ಆರ್. ಎಸ್. ಎಸ್. ವಿರುದ್ಧದ ಬಾಲಿಶ ಹೇಳಿಕೆಗಳಿಗೆ ತಕ್ಕ ಉತ್ತರ ನೀಡಲಿದೆ ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

