ಹಿರಿಯಡ್ಕ: ಪೆರ್ಡೂರಿನ ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ(ರಿ) ಶ್ರೀ ಶಕ್ತಿ ಸಂಘದಲ್ಲಿ ಬರೋಬ್ಬರಿ 23 ಲಕ್ಷ ರೂಪಾಯಿ ಹಣ ದುರುಪಯೋಗಪಡಿಸಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಆರೋಪದ ಮೇಲೆ ಒಕ್ಕೂಟದ ಮುಖ್ಯ ಬರಹಗಾರ್ತಿ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಕ್ಕೂಟದ ಅಧ್ಯಕ್ಷರಾದ ಶ್ಯಾಮಲಾ ಎಸ್.ಪಿ. ಅವರು ನೀಡಿದ ದೂರಿನನ್ವಯ ಮುಖ್ಯ ಬರಹಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಸುಗಂಧಿ ಎಂಬಾಕೆಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರತ್ಯೇಕ ಪುಸ್ತಕ ಇಟ್ಟು ವಂಚನೆ:
2020 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಒಕ್ಕೂಟವು ಸೊಸೈಟಿ ಆಕ್ಟ್ ಪ್ರಕಾರ ನೋಂದಣಿಯಾಗಿದ್ದು, ಒಟ್ಟು 68 ಸ್ವಸಹಾಯ ಗುಂಪುಗಳು ಹಾಗೂ 632 ಸದಸ್ಯರನ್ನು ಹೊಂದಿದೆ. ಸರ್ಕಾರದ ನಿಯಮಾನುಸಾರ ಜೀವನೋಪಾಯ ಚಟುವಟಿಕೆಗಳಿಗಾಗಿ ಒಕ್ಕೂಟಕ್ಕೆ ಇದುವರೆಗೆ ₹42 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಈ ಹಣವನ್ನು ಶೇ. 9ರ ಬಡ್ಡಿದರದಲ್ಲಿ ಸದಸ್ಯರಿಗೆ ಸಾಲದ ರೂಪದಲ್ಲಿ ವಿತರಿಸಬೇಕಾಗಿತ್ತು. ಬ್ಯಾಂಕ್ ಖಾತೆಗಳನ್ನು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ನಿರ್ವಹಿಸುತ್ತಿದ್ದರೆ, ದಾಖಲಾತಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಆರೋಪಿ ಸುಗಂಧಿ ಹೊತ್ತಿದ್ದರು.
ಆರೋಪದ ಮುಖ್ಯಾಂಶಗಳು:
- ಮರುಪಾವತಿ ಹಣ ಸ್ವಂತಕ್ಕೆ ಬಳಕೆ: 2023 ರಿಂದ 2025ರ ಡಿಸೆಂಬರ್ ಅವಧಿಯಲ್ಲಿ ಸದಸ್ಯರು ಮರುಪಾವತಿಸಿದ ಸಾಲದ ಹಣವನ್ನು ಜಮಾ ಪುಸ್ತಕಕ್ಕೆ ಸೇರಿಸದೆ ಆರೋಪಿ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾಳೆ.
- ನಕಲಿ ಸಹಿ, ನಕಲಿ ದಾಖಲೆ: ಕೆಲವು ಸದಸ್ಯರು ಕೇಳಿದ ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ನಮೂದಿಸಿ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ನಕಲಿ ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾಳೆ. ಅದನ್ನು ಅಸಲಿ ಎಂದು ಬ್ಯಾಂಕಿಗೆ ಸಲ್ಲಿಸಿ ಸಾಲ ಮಂಜೂರು ಮಾಡಿಸಿಕೊಂಡಿದ್ದಾಳೆ. ಸದಸ್ಯರಿಗೆ ಕೇಳಿದಷ್ಟು ಹಣ ನೀಡಿ, ಉಳಿದ ಮೊತ್ತವನ್ನು ತಾನೇ ಇಟ್ಟುಕೊಂಡಿದ್ದಾಳೆ.
- ದ್ವಂದ್ವ ಪುಸ್ತಕ ನಿರ್ವಹಣೆ: ಕಾರ್ಯಕಾರಿ ಸಮಿತಿಗೆ ತೋರಿಸಲು ಒಂದು ಸುಳ್ಳು ಪುಸ್ತಕ ಹಾಗೂ ಬ್ಯಾಂಕ್ ವ್ಯವಹಾರಕ್ಕೆ ಮತ್ತೊಂದು ಪ್ರತ್ಯೇಕ ಪುಸ್ತಕವನ್ನು ನಿರ್ವಹಿಸುವ ಮೂಲಕ ವಂಚನೆ ಎಸಗಿದ್ದಾಳೆ.
ಪೊಲೀಸರಿಂದ ತನಿಖೆ:
ವಿವಿಧ ಸಂಘಗಳ ಒಟ್ಟು ₹23,00,000 (23 ಲಕ್ಷ ರೂ.) ಹಣವನ್ನು ದುರುಪಯೋಗಪಡಿಸಿಕೊಂಡು, ನಂಬಿಕೆ ದ್ರೋಹ ಎಸಗಿರುವ ಕುರಿತು ದಾಖಲಾದ ದೂರಿನ ಅನ್ವಯ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ: 316(4), 318, 336(3), 340(2) ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

