ಭಟ್ಕಳ: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಭಟ್ಕಳ ಪಟ್ಟಣದಿಂದ ಸಾಗರ ರಸ್ತೆಯ ಕಡೆಗೆ ಕಾರಿನಲ್ಲಿ ಕರೆದೊಯ್ಯುತ್ತಿರುವುದನ್ನು ಪ್ರಶ್ನಿಸಿದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಂಡಿಸಿ ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಭಟ್ಕಳ ನಗರ ಠಾಣೆಯ ಮುಂದೆ ಬುಧವಾರ ರಾತ್ರಿ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿ ಬಿಟ್ಟು ರಕ್ಷಿಸಲು ಹೋದವರ ಮೇಲೆ ಕೇಸ್: ಗೋವಿಂದ ನಾಯ್ಕ ಆಕ್ರೋಶ
ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಗೋವಿಂದ ನಾಯ್ಕ ಅವರು ಈ ಕುರಿತು ಠಾಣೆಯ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಘಟನೆ ನಡೆದ ತಕ್ಷಣ ಆರೋಪಿಯ ಮೇಲೆ ಪ್ರಕರಣ ದಾಖಲಿಸುವುದನ್ನು ಬಿಟ್ಟು, ಹಿಂದೂ ಯುವತಿಯ ರಕ್ಷಣೆಗೆ ಹೋದವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದು ತೀವ್ರ ಖಂಡನೀಯ. ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲು ಯಾರ ಒತ್ತಡವಿದೆ?” ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಭಟ್ಕಳದಲ್ಲಿ ಇಂತಹ ಸುಮಾರು ಪ್ರಕರಣಗಳು ನಡೆದಿದ್ದರೂ ಸರಿಯಾದ ಸಾಕ್ಷ್ಯ ಇಲ್ಲದೇ ಇಷ್ಟು ದಿನ ಸುಮ್ಮನಿದ್ದೆವು. ಆದರೆ ಬುಧವಾರ ಬೆಳಗ್ಗೆ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ತಿಳಿದುಕೊಂಡಿದ್ದರೂ ಸಹ ಆರೋಪಿ ಮೇಲೆ ಕೇಸು ದಾಖಲಿಸುವುದನ್ನು ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದೀರಿ. ಸ್ಥಳದಲ್ಲಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್, ಪಿಎಸ್ಐ ಇದ್ದರೂ ಯಾಕೆ ಆರೋಪಿ ಮೇಲೆ ಕ್ರಮ ಕೈಗೊಂಡಿಲ್ಲ? ಆರೋಪಿಯಿಂದ ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡು, ನಮ್ಮಿಂದ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿರುವುದು ಯಾಕೆ ಎಂದು ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಭಟ್ಕಳ ಚಲೋ ಹಾಗೂ ಬಂದ್ ಎಚ್ಚರಿಕೆ:
“ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ದ ಆರೋಪಿಯನ್ನು ತತ್ ಕ್ಷಣ ಬಂಧಿಸಬೇಕು ಹಾಗೂ ಆತ ಈ ಹಿಂದೆ ಇಂತಹ ಎಷ್ಟು ಕೃತ್ಯ ಎಸಗಿದ್ದಾನೆ ಎನ್ನುವುದನ್ನು ತನಿಖೆ ನಡೆಸಬೇಕು. ಹಿಂದೂ ಕಾರ್ಯಕರ್ತರ ಮೇಲಿನ ಕೇಸನ್ನು ವಾಪಸ್ ಪಡೆಯದೇ ಇದ್ದಲ್ಲಿ ಭಟ್ಕಳ ಚಲೋಗೆ ಕರೆ ನೀಡಬೇಕಾದೀತು,” ಎಂದು ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೇ, ನಾಳೆಯೊಳಗೆ ಕೇಸ್ ವಾಪಸ್ ಪಡೆಯದಿದ್ದರೆ ‘ಭಟ್ಕಳ ಬಂದ್’ ಗೆ ಕರೆ ಕೊಡುವುದಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ.
ಪ್ರಮುಖ ಮುಖಂಡರ ಉಪಸ್ಥಿತಿ
ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಉಪಸ್ಥಿತರಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ, ಮುಖಂಡರಾದ ಈಶ್ವರ ಎನ್ ನಾಯ್ಕ, ಸುಬ್ರಾಯ ದೇವಾಡಿಗ, ಕೃಷ್ಣ ನಾಯ್ಕ ಆಸರಕೇರಿ ಮುಂತಾದವರು ಖಂಡಿಸಿ, ಪ್ರಕರಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಯಂತ ನಾಯ್ಕ, ರಾಮಕೃಷ್ಣ ನಾಯ್ಕ, ಬಿಜೆಪಿಯ ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ಶ್ರೀನಿವಾಸ ನಾಯ್ಕ ಹನುಮಾನ ನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ನಡುವೆ ಡಿವೈಎಸ್ಪಿ ಗಿರೀಶ್ ಅವರು ಗುರುವಾರ ಬೆಳಗ್ಗೆ ಪ್ರಕರಣ ಇತ್ಯರ್ಥ ಪಡಿಸಲಾಗುವುದು ಎಂದಿದ್ದಾರೆ. ಜಿಲ್ಲಾ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಅವರು ಭಟ್ಕಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದಿದ್ದಾರೆ.
ಯುವತಿಯಿಂದಲೂ ಯುವಕನ ಮೇಲೆ ದೂರು!
ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ, ಕಾರಿನಲ್ಲಿದ್ದ ಹಿಂದೂ ಯುವತಿಯು ಸಹ ಮುಸ್ಲಿಂ ಯುವಕನ ಮೇಲೆ ಬುಧವಾರ ಸಂಜೆ ದೂರು ನೀಡಿದ್ದಾಳೆ. ಆದರೆ ದೂರಿನಲ್ಲಿ ಆಕೆ ಏನು ತಿಳಿಸಿದ್ದಾಳೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಬಿಗಿ ಪೊಲೀಸ್ ಬಂದೋಬಸ್ತ್:
ಇದೊಂದು ಅತ್ಯಂತ ಸೂಕ್ಷ್ಮ ವಿಚಾರದ ಹಿನ್ನೆಲೆಯಾಗಿರುವುದರಿಂದ ಭಟ್ಕಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಮತ್ತೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

