ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಧರ್ಮಸ್ಥಳ ಗ್ರಾಮದ ‘ಬುರುಡೆ ಪ್ರಕರಣ’ (Dharmasthala Skull Case) ಈಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಕ್ಷೇತ್ರ ಹಾಗೂ ಧರ್ಮಸ್ಥಳದ ಹೆಗ್ಗಡೆಯವರ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಲು ತನ್ನನ್ನು ದಾಳವಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಪ್ರಕರಣದ ಪ್ರಮುಖ ವ್ಯಕ್ತಿ ಚಿನ್ನಯ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಈಗ ಸರ್ಕಾರ ಹಾಗೂ ಎಸ್ಐಟಿ (SIT) ಗೆ ನೋಟಿಸ್ ಜಾರಿ ಮಾಡಿದೆ.
ರಿಟ್ ಅರ್ಜಿಯಲ್ಲಿ ಚಿನ್ನಯ್ಯ ಬಿಚ್ಚಿಟ್ಟ ರಹಸ್ಯಗಳೇನು?
ತನ್ನ ಅರ್ಜಿಯಲ್ಲಿ ಹಲವು ಆಘಾತಕಾರಿ ವಿಷಯಗಳನ್ನು ಉಲ್ಲೇಖಿಸಿರುವ ಚಿನ್ನಯ್ಯ, ಧರ್ಮಸ್ಥಳದ ವಿರುದ್ಧ ಸುಳ್ಳು ಕಥೆ ಸೃಷ್ಟಿಸಲು ತನಗೆ ಆಮಿಷ ಹಾಗೂ ಬೆದರಿಕೆ ಒಡ್ಡಲಾಗಿತ್ತು ಎಂದು ದೂರಿದ್ದಾನೆ:
- ಬುರುಡೆ ಹಸ್ತಾಂತರ ಹಾಗೂ ಬೆದರಿಕೆ: ವಿಠಲ್ ಗೌಡ, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರು ತನ್ನನ್ನು ವಿವಿಧೆಡೆ ಕರೆದೊಯ್ದು ಸಣ್ಣ-ಪುಟ್ಟ ಹಣ ನೀಡುತ್ತಿದ್ದರು. ಬೆಂಗಳೂರಿನ ಜಯಂತ್ ಎಂಬುವವರ ಮನೆಯಲ್ಲಿ ತಲೆಬುರುಡೆ ನೀಡಿ, ಅದನ್ನು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿ ಫೋಟೋ ತೆಗೆಸಿಕೊಂಡಿದ್ದರು. ಕೋರ್ಟ್ನಲ್ಲಿ ತಮಗೆ ಪೂರಕವಾಗಿ ಹೇಳಿಕೆ ನೀಡದಿದ್ದರೆ ಕೊಂದು ಹೂಳುವುದಾಗಿ ಬೆದರಿಸಿದ್ದರು.
- ದೈಹಿಕ ಹಾಗೂ ಮಾನಸಿಕ ಶೋಷಣೆ: ಉಜಿರೆಯ ತಿಮರೋಡಿ ನಿವಾಸದಲ್ಲಿ ತನ್ನನ್ನು ಕೂಡಿ ಹಾಕಿ, ಅವರಿಂದ ಬಲವಂತವಾಗಿ ದೈಹಿಕ ಸೇವೆ (ಮಸಾಜ್) ಮಾಡಿಸಿಕೊಳ್ಳಲಾಗುತ್ತಿತ್ತು ಮತ್ತು ಅವರ ಕೃಷಿ ಭೂಮಿಯಲ್ಲಿ ಕೂಲಿ ಮಾಡಿಸಲಾಗುತ್ತಿತ್ತು.
- ಯೂಟ್ಯೂಬ್ ಚಾನೆಲ್ಗಳ ಬಳಕೆ: ಯೂಟ್ಯೂಬರ್ಗಳಾದ ಸಮೀರ್ ಎಂ.ಡಿ. ಮತ್ತು ಅಜಯ್ ಅವರ ಚಾನೆಲ್ಗಳಲ್ಲಿ ತಮಗೆ ಬೇಕಾದಂತೆ ಹೇಳಿಕೆಗಳನ್ನು ರೆಕಾರ್ಡ್ ಮಾಡಿಸಿದ್ದರು. ಇದಕ್ಕೆ ಪ್ರತಿಯಾಗಿ 5 ಲಕ್ಷ ರೂ. ಚೆಕ್ ನೀಡುವುದಾಗಿ ನಂಬಿಸಿದ್ದರು.
ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖ: ₹200 ಕೋಟಿ ಬಜೆಟ್ನ ಸಂಚು?
ಈ ಇಡೀ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರು ಮುಂಚೂಣಿಗೆ ಬಂದಿರುವುದು. ಚಿನ್ನಯ್ಯನ ರಿಟ್ ಅರ್ಜಿಯ ಪ್ರಕಾರ:
”ತಲೆಬುರುಡೆ ನೀಡಿ ಪೊಲೀಸರಿಗೆ ದೂರು ನೀಡಿದ ಬಳಿಕ ತನ್ನನ್ನು ಕೇರಳದ ರೆಸಾರ್ಟ್ಗೆ ಕರೆದೊಯ್ಯಲಾಗಿತ್ತು. ಅಲ್ಲಿ ರಾತ್ರಿ ನಟ ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ತನಗೆ ಫೋನ್ ಮಾಡಿ, ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟಂತೆಯೇ ಕೇಳಬೇಕು, ತಾನು ಜೂನ್ 29ಕ್ಕೆ ಬಂದು ಬೆಂಬಲಿಸುವುದಾಗಿ ತಿಳಿಸಿದ್ದರು.”
ಅಷ್ಟೇ ಅಲ್ಲದೆ, ಡಾ. ವೀರೇಂದ್ರ ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬಜೆಟ್ ಯೋಜನೆ ರೂಪಿಸಲಾಗಿತ್ತು. ತನಿಖಾ ತಂಡಕ್ಕೆ ತಪ್ಪು ಜಾಗ ತೋರಿಸಿ ಸರ್ಕಾರದ ಹಣ ವ್ಯಯ ಮಾಡಿಸಲು ಸಂಚು ಹೂಡಲಾಗಿತ್ತು. ಈ ಕುತಂತ್ರಕ್ಕೆ ಸಹಕರಿಸಿದರೆ ತನಗೆ 50 ಲಕ್ಷ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದ್ದರು. ಇಲ್ಲದಿದ್ದರೆ ಪತ್ನಿಯನ್ನು ಕೊಲ್ಲುವುದಾಗಿ ಹೆದರಿಸಿದ್ದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದಾನೆ.
ಹೈಕೋರ್ಟ್ನಿಂದ ಸರ್ಕಾರ ಹಾಗೂ SITಗೆ ನೋಟಿಸ್
ಕೊನೆಗೂ ಈ ವ್ಯವಸ್ಥಿತ ಸಂಚಿನಿಂದ ಭಯಭೀತನಾಗಿ ತಾನು ಎಸ್ಐಟಿ ಮುಂದೆ ನಿಜಸಂಗತಿಯನ್ನು ಒಪ್ಪಿಕೊಂಡಿರುವುದಾಗಿ ಚಿನ್ನಯ್ಯ ತಿಳಿಸಿದ್ದಾನೆ. ಆದರೆ, ಇಷ್ಟೆಲ್ಲಾ ಆದರೂ ಷಡ್ಯಂತ್ರ ರೂಪಿಸಿದವರ ವಿರುದ್ಧ ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತ ಕೋರ್ಟ್ ಮೆಟ್ಟಿಲೇರಿದ್ದಾನೆ.
ಅರ್ಜಿಯ ಗಂಭೀರತೆಯನ್ನು ಪರಿಗಣಿಸಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲದೆ, ಜೂನ್ 29 ರೊಳಗೆ ಈವರೆಗಿನ ತನಿಖೆಯ ಪ್ರಗತಿ ಹಾಗೂ ಸ್ಥಿತಿಗತಿಯ ಸಂಪೂರ್ಣ ವಿವರವನ್ನು ಕೋರ್ಟ್ಗೆ ಸಲ್ಲಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

