ಉಡುಪಿ: ತಾಲೂಕಿನ ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಬಳಿ ಇರುವ ‘ವಿಶ್ರಾಮ್ ಹೋಂ ಸ್ಟೇ’ ಮೇಲೆ ಮಲ್ಪೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಅಕ್ರಮವಾಗಿ ಮಾದಕ ವಸ್ತುಗಳನ್ನು ಹೊಂದಿದ್ದ ಹಾಗೂ ಸೇವನೆ ಮಾಡಿದ್ದ ಆರೋಪದಡಿ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ: ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಹೋಂ ಸ್ಟೇನಲ್ಲಿ ಮಾದಕ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಲ್ಪೆ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕ ಅನಿಲ್ ಕುಮಾರ್ ಡಿ, ತನಿಖಾ ವಿಭಾಗದ ಪಿಎಸ್ಐ ಗಂಗಪ್ಪ ಎಸ್. ಹಾಗೂ ಸಿಬ್ಬಂದಿಗಳಾದ ಆದರ್ಶ, ನಾಗೇಶ, ಉದಯ, ಆನಂದ ಗಾಣಿಗ, ನಾಗರಾಜ, ಕುಬೇರ, ಅಭಿಷೇಕ್ ಮತ್ತು ಪ್ರವೀಣ್ ಆರ್. ಅವರನ್ನೊಳಗೊಂಡ ಜಂಟಿ ತಂಡ ಈ ದಾಳಿ ನಡೆಸಿದೆ.
ಮಾದಕ ವಸ್ತು, ಮೊಬೈಲ್ ವಶ: ದಾಳಿಯ ವೇಳೆ ಹೋಂ ಸ್ಟೇನ ರೂಮ್ ಒಂದರಲ್ಲಿದ್ದ ಎಫ್.ಎಂ. ನಾಜಿಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಹಾಗೂ ವಿಘ್ನೇಶ್ ಎಂಬುವವರನ್ನು ತಪಾಸಣೆ ನಡೆಸಿದಾಗ ಅವರು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಬಳಿಕ ಪಂಚರ ಸಮ್ಮುಖದಲ್ಲಿ ನಡೆಸಿದ ಶೋಧನೆಯಲ್ಲಿ ಸುಮಾರು ₹3,000 ಮೌಲ್ಯದ 33.81 ಗ್ರಾಂ ಗಾಂಜಾ, ₹20,000 ಮೌಲ್ಯದ 9.73 ಗ್ರಾಂ ಎಂಡಿಎಂಎ (MDMA) ಹಾಗೂ 5 ಮೊಬೈಲ್ ಫೋನ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನೋಟಿಸ್ ನೀಡಿದ್ರೂ ಅಕ್ರಮ ಹೋಂ ಸ್ಟೇ: ಪ್ರವಾಸೋದ್ಯಮ ಇಲಾಖೆ ಹಾಗೂ ಮಲ್ಪೆ ಠಾಣಾಧಿಕಾರಿಗಳು ಈ ಹಿಂದೆ ನೋಟಿಸ್ ನೀಡಿದ್ದರೂ, ಅದನ್ನು ಉಲ್ಲಂಘಿಸಿ ಅಕ್ರಮವಾಗಿ ಹೋಂ ಸ್ಟೇ ನಡೆಸಲಾಗುತ್ತಿತ್ತು. ಅಲ್ಲದೆ ಗ್ರಾಹಕರಿಗೆ ಮಾದಕ ವಸ್ತು ಸೇವನೆ ಮಾಡಲು ಸಹಕರಿಸಿದ ಆರೋಪದ ಮೇಲೆ ಹೋಂ ಸ್ಟೇ ಮಾಲೀಕ ಧನ್ವನ್ ರಿಕಿತ್ ಹಾಗೂ ಅಲ್ಲಿನ ಕೆಲಸಗಾರ ಬಸವರಾಜ್ನನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಜಾಲದಲ್ಲಿ ಭಾಗಿಯಾಗಿದ್ದ ಒಡಿಶಾ ಮೂಲದ ಗೀತಾಂಜಲಿ ಜೇನ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ (NDPS) ಕಾಯ್ದೆಯ ವಿವಿಧ ಕಲಂ ಅಡಿಯಲ್ಲಿ ಪ್ರಕರಣ (ಮೊ.ಸಂ: 67/2026) ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

