ಬೆಂಗಳೂರು: ಕಳೆದ ಹಲವು ತಿಂಗಳುಗಳಿಂದ ವೇತನ ಹಿಂಬಾಕಿಗಾಗಿ (Arrears) ಕಾಯುತ್ತಿದ್ದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಕರ್ನಾಟಕ ಸರ್ಕಾರವು ಕೊನೆಗೂ ಗುಡ್ನ್ಯೂಸ್ ನೀಡಿದೆ. ಸಾರಿಗೆ ನೌಕರರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ, ಮೊದಲ ಕಂತಿನ ಹಿಂಬಾಕಿ ಹಣವಾಗಿ 450 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯದ ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ವಾಯುವ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ರಸ್ತೆ ಸಾರಿಗೆ ಸಂಸ್ಥೆಗಳ ನೌಕರರಿಗೆ 2021ರ ಜನವರಿ 1 ರಿಂದ 2023ರ ಫೆಬ್ರವರಿ 28ರವರೆಗಿನ ಒಟ್ಟು 26 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಬರಬೇಕಿತ್ತು.
ಲೆಕ್ಕಾಚಾರದ ಪ್ರಕಾರ, ಸರ್ಕಾರವು ನೌಕರರಿಗೆ ಒಟ್ಟು 1,271.92 ಕೋಟಿ ರೂಪಾಯಿಗಳನ್ನು ಪಾವತಿಸಬೇಕಿದೆ. ಈ ಬೃಹತ್ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಲು ಆರ್ಥಿಕ ಹೊರೆಯಾಗುವ ಹಿನ್ನೆಲೆಯಲ್ಲಿ, ಈಗ ಮೊದಲ ಹಂತವಾಗಿ 450 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಅನುದಾನ ಬಿಡುಗಡೆ ಮಾಡುವ ವೇಳೆ ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದ್ದು ಬಿಡುಗಡೆ ಮಾಡಲಾದ ಈ ಹಣವನ್ನು ಕೇವಲ ನೌಕರರ ವೇತನ ಹಿಂಬಾಕಿ ಪಾವತಿಗೆ ಮಾತ್ರ ಬಳಸಬೇಕು, ಬೇರೆ ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. ಯಾವುದೇ ವಿಳಂಬವಿಲ್ಲದೆ ತಕ್ಷಣವೇ ನೌಕರರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡಬೇಕು. ಹಣ ಹಂಚಿಕೆಯಾದ ನಂತರ ಕಡ್ಡಾಯವಾಗಿ ಬಳಕೆಯ ಪ್ರಮಾಣ ಪತ್ರವನ್ನು (Utilization Certificate) ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿದೆ.
ಹಲವು ದಿನಗಳಿಂದ ಪ್ರತಿಭಟನೆ ಮತ್ತು ಮನವಿಗಳ ಮೂಲಕ ಬಾಕಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ ನೌಕರರ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿವೆ. ಉಳಿದಿರುವ ಸುಮಾರು 821.92 ಕೋಟಿ ರೂಪಾಯಿಗಳನ್ನು ಸಹ ಮುಂದಿನ ಕಂತುಗಳಲ್ಲಿ ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ನೌಕರರು ವಿನಂತಿಸಿದ್ದಾರೆ. ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ಸಾರಿಗೆ ನೌಕರರ ಕುಟುಂಬಗಳಲ್ಲಿ ನೆಮ್ಮದಿ ಮೂಡಿದೆ.

