ನೆಲ್ಯಾಡಿ: ಪೆರಿಯಶಾಂತಿ ಮತ್ತು ಇಚಿಲಂಪಾಡಿ ರಸ್ತೆಯ ಮಧ್ಯೆ ಇರುವ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಇಚಿಲಂಪಾಡಿ ಗ್ರಾಮದ ಬಿಜೀರು ನಿವಾಸಿ ಎಸ್. ಸಜೀವ (46) ಎಂದು ತಿಳಿದು ಬಂದಿದೆ.
ಶನಿವಾರ ಬೆಳಿಗ್ಗೆ ತನ್ನ ಬೈಕ್ನಲ್ಲಿ ಮನೆಯಿಂದ ಹೊರಟಿದ್ದ ಸಜೀವ ಅವರು ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ ಎಂದು ತಿಳಿದು ಆತಂಕಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು.
ಭಾನುವಾರ ಬೆಳಿಗ್ಗೆ ಪೆರಿಯಶಾಂತಿಯಿಂದ ಇಚಿಲಂಪಾಡಿಗೆ ಹೋಗುವ ರಸ್ತೆಯ ಬದಿಯಲ್ಲಿ ಸಜೀವ ಅವರ ಬೈಕ್ ಪತ್ತೆಯಾಗಿತ್ತು.
ಬೈಕ್ ಕಂಡು ಅನುಮಾನಗೊಂಡ ಕುಟುಂಬಸ್ಥರು ಸುತ್ತಮುತ್ತಲಿನ ಕಾಡಿನಲ್ಲಿ ಶೋಧ ನಡೆಸಿದಾಗ, ಮರದ ಬುಡವೊಂದರಲ್ಲಿ ಸಜೀವ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಕಂಡುಬಂದಿದ್ದು, ಸಜೀವ ಅವರು ಮೊದಲು ಮದ್ಯ ಸೇವಿಸಿ, ಬಳಿಕ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

