ಉಡುಪಿ : ನದಿಯಿಂದ ಮರುವಾಯಿ(ಚಿಪ್ಪು ಮೀನು) ತೆಗೆಯಲು ತೆರಳಿದ್ದ ರಿಕ್ಷಾ ಚಾಲಕರೊಬ್ಬರು ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ದುರ್ಘಟನೆ ಉಡುಪಿಯ ಪರ್ಕಳ ಸಮೀಪದ ಹೆರ್ಗ ಗ್ರಾಮದ ಹೊಳೆಬಾಗಿಲು ಪ್ರದೇಶದಲ್ಲಿ ನಡೆದಿದೆ.
ಪರ್ಕಳ ಗ್ಯಾಟ್ಸನ್ ಸರ್ಕಲ್ ರಿಕ್ಷಾ ನಿಲ್ದಾಣದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸುಜಿತ್ ಅವರು ನಿನ್ನೆ ಮಧ್ಯಾಹ್ನ ಸ್ವರ್ಣ ನದಿಗೆ ಮರುವಾಯಿ ಹೆಕ್ಕಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿ ಪಾಲಾಗಿದ್ದಾರೆ.

ಘಟನೆ ಬಳಿಕ ಸ್ಥಳೀಯರು ಹಾಗೂ ಅಧಿಕಾರಿಗಳು ನದಿಯ ಸುತ್ತಮುತ್ತ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ.
ಇಂದು ಬೆಳಗಿನ ಜಾವ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮೃತ ಸುಜಿತ್ ಅವರಿಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಇದ್ದು, ಕುಟುಂಬದ ಏಕೈಕ ಆಧಾರವಾಗಿದ್ದ ಇವರ ಅಗಲಿಕೆ ಕುಟುಂಬಕ್ಕೆ ದುಃಖವನ್ನುಂಟು ಮಾಡಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

