ಉಡುಪಿ : ಬೈಕ್ ಅಪಘಾತಕ್ಕೀಡಾದ ಯುವಕರು ಹಾಗೂ ಅವರ ಸಹಾಯಕ್ಕೆ ಬಂದ ಗೆಳೆಯರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಚಿನ್ನದ ಸರ ಲೂಟಿ ಮಾಡಿರುವ ಘಟನೆ ಉಡುಪಿ ತಾಲೂಕಿನ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.
ಉಡುಪಿಯ ಬಡಗುಬೆಟ್ಟು ನಿವಾಸಿ ವೈಭವ್ ಬಿ ನಾಯಕ್ ಅವರ ಗೆಳೆಯರಾದ ಅಭಯ್ ಸ್ಯಾಮುವೆಲ್ ಮತ್ತು ಶಾಶ್ವತ್ ಶೆಟ್ಟಿ ಮೇ 3ರಂದು ಮಧ್ಯರಾತ್ರಿ ಬೈಕ್ನಲ್ಲಿ ಹೊರಟಿದ್ದರು. ಕುಕ್ಕಿಕಟ್ಟೆ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಆಯತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದರು. ಈ ವೇಳೆ ಅಲ್ಲಿ ಜಮಾಯಿಸಿದ ಸಾರ್ವಜನಿಕರ ಗುಂಪು ಯುವಕರ ಮೇಲೆ ಹಲ್ಲೆ ನಡೆಸಲು ಆರಂಭಿಸಿದೆ.
ಅಪಘಾತದ ವಿಷಯ ತಿಳಿದ ವೈಭವ್ ಮತ್ತು ಗೆಳೆಯರು ಸ್ಥಳಕ್ಕೆ ಧಾವಿಸಿದಾಗ, ಅಲ್ಲಿದ್ದ ಜನರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗುಂಪಿನಲ್ಲಿದ್ದ ಶೇಖರ ಎಂಬಾತ ವೈಭವ್ ಅವರ ಕೆನ್ನೆಗೆ ಹೊಡೆದಿದ್ದು, ಉಳಿದ ಹತ್ತಾರು ಜನರು ವೈಭವ್, ಶಾಶ್ವತ್, ಅಭಯ್ ಮತ್ತು ಆದಿತ್ಯ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಯಾರೋ ಕಿಡಿಗೇಡಿಗಳು ಮರದ ರೀಪಿನಿಂದ ವೈಭವ್ ಅವರ ತಲೆಗೆ ಬಲವಾಗಿ ಹೊಡೆದಿದ್ದು, ಅವರು ತೀವ್ರವಾಗಿ ರಕ್ತಸ್ರಾವಕ್ಕೊಳಗಾಗಿದ್ದಾರೆ. ಗಲಾಟೆಯ ನಡುವೆ ವೈಭವ್ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಳ್ಳಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2026ರಡಿ ವಿವಿಧ ಬಿಎನ್ಎಸ್ (BNS) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

