ಪಡುಬಿದ್ರಿ : ಕಾಂಜರಕಟ್ಟೆ ಅಯ್ಯಪ್ಪ ಗುಡಿ ಎದುರಿನ ‘ರಸ್ತೆ ತಿರುವಿನಲ್ಲಿ ಸೋಮವಾರ ಮಧ್ಯಾಹ್ನ ಸ್ಕೂಟರೊಂದಕ್ಕೆ ಟಿಪ್ಪರ್ ಡಿಕ್ಕಿ ಹೊಡೆದು ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ತಂದೆ ಮೃತಪಟ್ಟಿದ್ದು, ಪುತ್ರಿ ಗಾಯಗೊಂಡ ಘಟನೆ ನಡೆದಿದೆ.
ಪಡುಬಿದ್ರಿ ಬೀಡು ಬಳಿ ನಿವಾಸಿ ಅಶೋಕ್ ಭಂಡಾರಿ(61) ಮೃತಪಟ್ಟವರು.
ಸಹ ಸವಾರೆ, ಅವರ ಪುತ್ರಿ ಅರ್ಪಿತಾ (25) ಅವರ ಮೊಣಕೈ ಮೂಳೆ ಮುರಿತವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಡುಬಿದ್ರಿಯಿಂದ ಕಾರ್ಕಳದತ್ತ ಹೋಗುತ್ತಿದ್ದ ಸ್ಕೂಟರ್, ರಸ್ತೆ ತಿರುವಿನಲ್ಲಿ ಎದುರು ಬದಿಯಿಂದ ಬರುತ್ತಿದ್ದ ಟಿಪ್ಪರ್ ನ ಹಿಂಬದಿ ಚಕ್ರದ ಬಲಭಾಗ ಡಿಕ್ಕಿ ಯಾಗಿದೆ.
ಅಶೋಕ್ ಭಂಡಾರಿ ಅವರು ಪಡುಬಿದ್ರಿ ಬೀಡುವಿನ ಟಾಟಾ ಶೋರೂಂ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

