ಉಡುಪಿ: ಚಿಕ್ಕಮಗಳೂರು ಮೂಲದ ದಿವ್ಯಾಂಗ ಮಹಿಳೆಯೊಬ್ಬರು ಕುಂದಾಪುರದ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದ ಸವಿತಾ (40) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮೃತ ಸವಿತಾ ಅವರು ದಿವ್ಯಾಂಗರಾಗಿದ್ದು, ಕಳೆದ ಕೆಲವು ಸಮಯದಿಂದ ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೇ 29 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ತಾಯಿ ಅಂಬಿಕಾ ಅವರೊಂದಿಗೆ ಕುಂದಾಪುರದ ಪ್ರಸಿದ್ಧ ಶ್ರೀ ಶಂಕರನಾರಾಯಣ ದೇವಸ್ಥಾನಕ್ಕೆ ಬಂದಿದ್ದಾಗ ಸವಿತಾ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡಿನಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆಗೆ ಮೇ 30 ರಂದು ತಡರಾತ್ರಿ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಗಳು ಸವಿತಾ ಮೃತಪಟ್ಟಿರುವುದಾಗಿ ಧೃಡೀಕರಿಸಿದ್ದಾರೆ.

