ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕೋಕಾ ಕಾಯ್ದೆ ಪ್ರಕರಣದಲ್ಲಿ (ಅಪರಾಧ ಕ್ರಮಾಂಕ: 208/2025) ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಸಹಕರಿಸಿದ ಬಾತ್ಮೀದಾರರಿಗೆ ಘೋಷಿಸಲಾಗಿದ್ದ ತಲಾ 50,000 ರೂಪಾಯಿ ನಗದು ಬಹುಮಾನವನ್ನು ಪೊಲೀಸ್ ಇಲಾಖೆ ಹಸ್ತಾಂತರಿಸಿದೆ.
ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಎರಡನೇ ಆರೋಪಿ ಚೇತನ್ ಅಲಿಯಾಸ್ ಚೇತು ಪಡೀಲ್ ಎಂಬಾತನನ್ನು ಕಳೆದ ಏಪ್ರಿಲ್ 30 ರಂದು ಹಾಗೂ ಮೊದಲನೇ ಆರೋಪಿ ಮನೋಜ್ ಕುಲಾಲ್ ಅಲಿಯಾಸ್ ಮನೋಜ್ ಕೋಡಿಕೆರೆ ಎಂಬಾತನನ್ನು ಜೂನ್ 11 ರಂದು ದಸ್ತಗಿರಿ ಮಾಡಿದ್ದಾರೆ. ಈ ಹಿಂದೆ ಆರೋಪಿಗಳ ಪತ್ತೆಗಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದ ಪೊಲೀಸರು, ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಿಸಿದ್ದರು. ಅದರಂತೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಬಹುಮಾನದ ಹಣವನ್ನು ವಿತರಿಸಲಾಗಿದ್ದು, ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಲು ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ಮುಂದೆಯೂ ಸಾರ್ವಜನಿಕರು ಇದೇ ರೀತಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.

