ಫಿಟ್ನೆಸ್ ಕಾಪಾಡಿಕೊಳ್ಳಲು ಮತ್ತು ಸ್ನಾಯುಗಳ ಬೆಳವಣಿಗೆಗೆ ಮೊಟ್ಟೆ ಅತ್ಯುತ್ತಮ ಆಹಾರ. ಏಕೆಂದರೆ ಇದರಲ್ಲಿ, ಗರಿಷ್ಠ ಪೋಷಕಾಂಶಗಳು ಇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಿಮ್ಗೆ ಹೋಗುವ ಅನೇಕ ಯುವಕರು ಹಸಿ ಮೊಟ್ಟೆಗಳನ್ನು ಸೇವಿಸುವ ಕ್ರೇಜ್ ಬೆಳೆಸಿಕೊಂಡಿದ್ದಾರೆ. ಹಸಿ ಮೊಟ್ಟೆ ಕುಡಿದರೆ ಹೆಚ್ಚಿನ ಪ್ರೋಟೀನ್ ಸಿಗುತ್ತದೆ ಎಂಬುದು ಅವರ ನಂಬಿಕೆ. ಆದರೆ, ಈ ಅಭ್ಯಾಸ ಎಷ್ಟು ಸುರಕ್ಷಿತ? ಹಸಿ ಮೊಟ್ಟೆಯಲ್ಲಿ ನಿಜಕ್ಕೂ ಹೆಚ್ಚು ಪ್ರೋಟೀನ್ ಇದೆಯೇ? ಈ ಬಗ್ಗೆ ಆರೋಗ್ಯ ತಜ್ಞರು ಮತ್ತು ಸಂಶೋಧನೆಗಳು ಏನು ಹೇಳುತ್ತವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
ಜಿಮ್ಗೆ ಹೋಗುವವರು, ಬಾಡಿ ಬಿಲ್ಡರ್ಗಳು ಮತ್ತು ಯುವ ಪೀಳಿಗೆಯಲ್ಲಿ ಹಸಿ ಮೊಟ್ಟೆ ಸೇವಿಸಿದರೆ ಹೆಚ್ಚು ಪ್ರೋಟೀನ್ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿದೆ. ಆದರೆ, ಇದು ಕೇವಲ ಒಂದು ‘ಪಾಪ್ ಕಲ್ಚರ್ ಭ್ರಮೆ’ (Pop Culture Myth) ಎಂದು ಖ್ಯಾತ ವೈದ್ಯರಾದ ಡಾ. ಅಂಶುಮಾನ್ ಕೌಶಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ. 1998ರಲ್ಲಿ ಬೆಲ್ಜಿಯಂನಲ್ಲಿ ನಡೆದ ‘ಜರ್ನಲ್ ಆಫ್ ನ್ಯೂಟ್ರಿಷನ್’ ಅಧ್ಯಯನವನ್ನು ಉಲ್ಲೇಖಿಸಿರುವ ಅವರು, ಹಸಿ ಮೊಟ್ಟೆಗಿಂತ ಬೇಯಿಸಿದ ಮೊಟ್ಟೆಯೇ ಆರೋಗ್ಯಕ್ಕೆ ಅತ್ಯುತ್ತಮ ಎಂದು ಸ್ಪಷ್ಟಪಡಿಸಿದ್ದಾರೆ.
ಬೇಯಿಸಿದ ಮೊಟ್ಟೆ vs ಹಸಿ ಮೊಟ್ಟೆ: ಪ್ರೋಟೀನ್ ವ್ಯತ್ಯಾಸ ಎಷ್ಟು?
ವೈದ್ಯರ ಪ್ರಕಾರ, ಬೇಯಿಸಿದ ಮೊಟ್ಟೆಯನ್ನು ತಿಂದಾಗ ನಮ್ಮ ದೇಹವು ಅದರಲ್ಲಿರುವ ಶೇಕಡಾ 91 ರಷ್ಟು ಪ್ರೋಟೀನ್ ಅನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಆದರೆ, ಹಸಿ ಮೊಟ್ಟೆಯನ್ನು ಸೇವಿಸಿದಾಗ ದೇಹಕ್ಕೆ ಸಿಗುವುದು ಕೇವಲ ಶೇಕಡಾ 51 ರಷ್ಟು ಪ್ರೋಟೀನ್ ಮಾತ್ರ. ಅಂದರೆ, ಹಸಿ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಸಿಗಬೇಕಾದ ಪ್ರೋಟೀನ್ನಲ್ಲಿ ಸುಮಾರು ಶೇಕಡಾ 40 ರಷ್ಟು ವ್ಯರ್ಥವಾಗುತ್ತದೆ.
ಮೊಟ್ಟೆ ಬೇಯಿಸುವುದರಿಂದಾಗುವ ಪ್ರಮುಖ ಪ್ರಯೋಜನಗಳು:
- ಸುಲಭ ಜೀರ್ಣಕ್ರಿಯೆ: ಮೊಟ್ಟೆಯನ್ನು ಬಿಸಿ ಮಾಡಿದಾಗ ಅದರ ಪ್ರೋಟೀನ್ ರಚನೆಯು ಒಡೆಯುತ್ತದೆ. ಇದರಿಂದ ದೇಹದ ಜೀರ್ಣಕಾರಿ ಕಿಣ್ವಗಳು ಅಮೈನೋ ಆಮ್ಲಗಳನ್ನು ಸುಲಭವಾಗಿ ಬಿಡುಗಡೆ ಮಾಡಿ, ಪೋಷಕಾಂಶಗಳು ದೇಹಕ್ಕೆ ಬೇಗನೆ ಸಿಗುವಂತೆ ಮಾಡುತ್ತವೆ.
- ಕೂದಲು ಮತ್ತು ಚರ್ಮದ ಆರೋಗ್ಯ: ಹಸಿ ಮೊಟ್ಟೆಯ ಬಿಳಿಭಾಗದಲ್ಲಿ ‘ಅವಿಡಿನ್’ ಎಂಬ ಪ್ರೋಟೀನ್ ಇರುತ್ತದೆ. ಇದು ದೇಹವು ಬಯೋಟಿನ್ (ವಿಟಮಿನ್ B7) ಅನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ಮೊಟ್ಟೆಯನ್ನು ಬೇಯಿಸಿದಾಗ ಈ ಅವಿಡಿನ್ ನಾಶವಾಗಿ, ಬಯೋಟಿನ್ ಮುಕ್ತವಾಗಿ ಬಿಡುಗಡೆಯಾಗುತ್ತದೆ. ಇದು ಕೂದಲು ಉದುರುವಿಕೆ, ಚರ್ಮದ ಸಮಸ್ಯೆ ಹಾಗೂ ಉಗುರು ಮುರಿಯುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಚಿಪ್ಪು ತೊಳೆದರೆ ಹೋಗಲ್ಲ ಬ್ಯಾಕ್ಟೀರಿಯಾ: ‘ಸಾಲ್ಮೊನೆಲ್ಲಾ’ ಅಪಾಯ!
ಹಸಿ ಮೊಟ್ಟೆಗಳನ್ನು ನೇರವಾಗಿ ಸೇವಿಸುವುದರಿಂದ ‘ಸಾಲ್ಮೊನೆಲ್ಲಾ’ (Salmonella) ಎಂಬ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕಿನ ಭೀತಿ ಇರುತ್ತದೆ. ಅನೇಕರು ಮೊಟ್ಟೆಯ ಚಿಪ್ಪನ್ನು ತೊಳೆದರೆ ಬ್ಯಾಕ್ಟೀರಿಯಾ ಹೋಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಈ ಬ್ಯಾಕ್ಟೀರಿಯಾವು ಕೋಳಿಯ ಅಂಡಾಶಯದ ಮೂಲಕವೇ ಮೊಟ್ಟೆಯೊಳಗೆ ಸೇರಿರುತ್ತದೆ (ಟ್ರಾನ್ಸ್ಓವೇರಿಯನ್ ಟ್ರಾನ್ಸ್ಮಿಷನ್). ಹಾಗಾಗಿ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿಂದಾಗ ಮಾತ್ರ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ವಿಶೇಷ ಸೂಚನೆ: ಗರ್ಭಿಣಿಯರು, ಸಣ್ಣ ಮಕ್ಕಳು, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಕ್ಯಾನ್ಸರ್ ರೋಗಿಗಳು ಹಾಗೂ ಅಂಗಾಂಗ ಕಸಿ (Organ Transplant) ಮಾಡಿಸಿಕೊಂಡವರು ಹಸಿ ಮೊಟ್ಟೆಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಇದು ಪ್ರಾಣಕ್ಕೆ ಮಾರಕವಾಗುವ ಸಾಧ್ಯತೆ ಇರುತ್ತದೆ.

