ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ದುರುಪಯೋಗಕ್ಕೆ ತಡೆ ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಇನ್ಮುಂದೆ ಫಲಾನುಭವಿಗಳ ಅರ್ಜಿ ನವೀಕರಣ ಪ್ರಕ್ರಿಯೆಗೆ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗುತ್ತಿದೆ. ಯೋಜನೆಯಡಿ ಸತ್ತವರ ಖಾತೆಗೂ ಹಣ ಸಂದಾಯವಾಗುತ್ತಿರುವುದು ಹಾಗೂ ಆದಾಯ ತೆರಿಗೆ ಪಾವತಿದಾರರೂ ಇದರ ಸೌಲಭ್ಯ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಇಲಾಖೆಯು ನಡೆಸಿದ ಪರಿಶೀಲನೆಯಲ್ಲಿ 17 ಜಿಲ್ಲೆಗಳಲ್ಲಿ ಸುಮಾರು 1.12 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇವರಲ್ಲಿ ಮೃತಪಟ್ಟ 1.48 ಲಕ್ಷ ಮಹಿಳೆಯರ ಖಾತೆಗಳಿಗೆ ನಿಯಮಬಾಹಿರವಾಗಿ ಸುಮಾರು ₹120 ಕೋಟಿಗೂ ಅಧಿಕ ಹಣ ಪಾವತಿಯಾಗಿರುವುದು ಪತ್ತೆಯಾಗಿದ್ದು, ಇಲಾಖೆಯು ಈ ಹಣವನ್ನು ವಾಪಸ್ ವಸೂಲಿ ಮಾಡಲು ಬ್ಯಾಂಕ್ಗಳಿಗೆ ಸೂಚನೆ ನೀಡಿದೆ.
ಮುಂದಿನ ದಿನಗಳಲ್ಲಿ ಹಳೇ ಅರ್ಜಿಯ ಆಧಾರದ ಮೇಲೆಯೇ ನವೀಕರಣ ಪ್ರಕ್ರಿಯೆ ನಡೆಯಲಿದ್ದು, ಫಲಾನುಭವಿಗಳು ಹೆಬ್ಬೆಟ್ಟು (ಬಯೋಮೆಟ್ರಿಕ್), ಕಣ್ಣಿನ ರೆಟಿನಾ ಅಥವಾ ಫೇಸ್ ರೆಕಗ್ನಿಷನ್ ಮೂಲಕ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ತಮ್ಮ ದೃಢೀಕರಣವನ್ನು ಪೂರ್ಣಗೊಳಿಸಬೇಕಾಗುತ್ತದೆ. ವಯೋಸಹಜ ಕಾರಣಗಳಿಂದ ಹೆಬ್ಬೆಟ್ಟು ಗುರುತು ಮೂಡದ ಹಿರಿಯ ನಾಗರಿಕರಿಗೆ ಪರ್ಯಾಯವಾಗಿ ಮುಖದ ಗುರುತು ಅಥವಾ ಕಣ್ಣಿನ ಸ್ಕ್ಯಾನಿಂಗ್ ಬಳಸಲು ಅವಕಾಶ ಕಲ್ಪಿಸಲಾಗಿದೆ. ಮೃತ ಫಲಾನುಭವಿಗಳ ವಿವರಗಳನ್ನು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸಂಗ್ರಹಿಸಲಾಗುತ್ತಿದ್ದು, ಯೋಜನೆಯು ಕೇವಲ ಅರ್ಹ ಬಡ ಮಹಿಳೆಯರಿಗೆ ಮಾತ್ರ ತಲುಪುವಂತೆ ಮಾಡಲು ಸರ್ಕಾರ ಈ ಎಲ್ಲಾ ಮಾರ್ಗಸೂಚಿಗಳನ್ನು ವಾರದಲ್ಲೇ ಜಾರಿಗೆ ತರಲು ಸಿದ್ಧತೆ ನಡೆಸಿದೆ.

