ಮಂಗಳೂರು : ಮಹಿಳೆಯೊಬ್ಬರು ಕಾವೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಆಟೋದಲ್ಲಿ ತನ್ನ ಮನೆಗೆ ತೆರಳುತ್ತಿದ್ದಾಗ ಚಿನ್ನಾಭರಣಗಳಿದ್ದ ಬ್ಯಾಗ್ ಕಳಕೊಂಡಿದ್ದು ಕಾವೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಆಟೋವನ್ನು ಪತ್ತೆಹಚ್ಚಿ ಬಂಗಾರ ಮರಳಿಸಿದ್ದಾರೆ.
ಕುಂಜತ್ತ್ ಬೈಲು ನಿವಾಸಿ ರೇಖಾ ತಾಜವ್ ಎಂಬವರು ಎಪ್ರಿಲ್ 7ರಂದು ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ತನ್ನ ಮನೆಯಾದ ಕುಂಜತ್ ಬೈಲಿಗೆ ಆಟೋ ರಿಕ್ಷಾದಲ್ಲಿ ಹೋಗಿದ್ದು ಮನೆಗೆ ತಲುಪಿದಾಗ ಅವರು ತನ್ನ ಬ್ಯಾಗ್ ಅನ್ನು ಆಟೋ ರಿಕ್ಷಾದಲ್ಲಿಯೇ ಮರೆತು ಇಳಿದಿದ್ದರು. ಬ್ಯಾಗ್ ನಲ್ಲಿ 4 ಚಿನ್ನದ ಉಂಗುರಗಳು ಮತ್ತು 1 ಚಿನ್ನದ ಪೆಂಡೆಂಟ್ ಹಾಗೂ 2 ವಾಚ್ ಇದ್ದ ವಿಷಯ ತಿಳಿದಾಗ ಆಟೋ ಹಿಂತಿರುಗಿ ಹೋಗಿತ್ತು.
ಮಹಿಳೆ ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿ ಆಟೋ ಚಾಲಕನ ಬಗ್ಗೆ ಒಂದಷ್ಟು ವಿವರ ನೀಡಿದ್ದರು. ತಕ್ಷಣವೇ ಕಾವೂರು ಠಾಣಾ ಸಿಬ್ಬಂದಿಗಳು ಸದ್ರಿ ರಸ್ತೆಯಲ್ಲಿ ಸಿಸಿಟಿವಿ ಚೆಕ್ ಮಾಡಿದ್ದು ಆಟೋ ರಿಕ್ಷಾ ನಂಬರ್ ಪತ್ತೆ ಮಾಡಿದ್ದಾರೆ. ಬಳಿಕ ಆಟೋ ಚಾಲಕನನ್ನು ವಿಚಾರಿಸಿದಾಗ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ.
ಆಟೋವನ್ನು ಪರಿಶೀಲನೆ ನಡೆಸಿದಾಗ ಡಿಕ್ಕಿಯಲ್ಲಿ ಮಹಿಳೆಯ ಬ್ಯಾಗ್ ಪತ್ತೆಯಾಗಿದ್ದು ಅದರಲ್ಲಿ ಬಂಗಾರದ ಒಡವೆಗಳು ಹಾಗೇ ಇದ್ದವು. ಘಟನೆ ನಡೆದು 24 ಗಂಟೆ ಒಳಗೆ ಆಟೋ ಪತ್ತೆಹಚ್ಚಿದ ಪೊಲೀಸರು ಕಳೆದು ಹೋದ ಬ್ಯಾಗ್ ಸಮೇತ ಎಲ್ಲಾ ಬಂಗಾರವನ್ನು ಮಹಿಳೆಗೆ ಒಪ್ಪಿಸಿದ್ದಾರೆ.

