ತೆಕ್ಕಟ್ಟೆ: ಇಲ್ಲಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳಿಗುಂಡಿ ಹಿರೇಹೊಳೆಯಲ್ಲಿ ಈಜಲು ತೆರಳಿದ್ದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ದಾರುಣ ಘಟನೆ ಜೂನ್ 13ರ ಶನಿವಾರ ಸಂಜೆ 4.30ರ ಸುಮಾರಿಗೆ ಸಂಭವಿಸಿದೆ.
ನಾಪತ್ತೆಯಾದ ಯುವಕನನ್ನು ಗರಿಕೇಮರದ ನಿವಾಸಿಗಳಾದ ನಾಗರಾಜ್ ಹಾಗೂ ಶಿವಗಾಮಿ ದಂಪತಿಗಳ ಪುತ್ರ ಸಾಮರಾಜ್ (21) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಖಾಸಗಿ ಸಂಸ್ಥೆಯೊಂದರಲ್ಲಿ ಬಿ.ಕಾಂ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ.
ಘಟನೆಯ ವಿವರ:
ಸಾಹೇಬರಕಟ್ಟೆಯಿಂದ 7 ಮಂದಿ ಸ್ನೇಹಿತರ ತಂಡವೊಂದು ಸಂಜೆ ವೇಳೆ ಇಲ್ಲಿನ ಬೇಳೂರು – ಅಚ್ಲಾಡಿ ಸಂಪರ್ಕ ಕಲ್ಪಿಸುವ ಕೋಣಬಗೆ ಸೇತುವೆಯ ಮೇಲ್ಭಾಗದಲ್ಲಿ ನಿಂತಿತ್ತು. ಈ ಸಂದರ್ಭದಲ್ಲಿ ಹಿರೇಹೊಳೆಯಲ್ಲಿ ನೀರಿನ ಮಟ್ಟ ಕಡಿಮೆ ಇರುವುದನ್ನು ಕಂಡು ಸಾಮರಾಜ್ ಮಾತ್ರ ಈಜಲು ಮುಂದಾಗಿದ್ದನೆನ್ನಲಾಗಿದೆ. ಆದರೆ, ಹೊಳೆಯಲ್ಲಿ ನೀರಿನ ಒಳಹರಿವು (ಅಂಡರ್ ಕರೆಂಟ್) ಹೆಚ್ಚಾಗಿದ್ದ ಪರಿಣಾಮವಾಗಿ ಆತ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಘಟನೆ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಗ್ರಾಮೀಣರು ಸ್ಥಳದಲ್ಲಿ ಜಮಾಯಿಸಿದ್ದರು.
ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ತೀವ್ರ ಶೋಧ:
ದುರ್ಘಟನೆ ನಡೆದ ತಕ್ಷಣ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯ ವಿಪತ್ತು ನಿರ್ವಹಣಾ ಘಟಕದ ಸುಕುಮಾರ್ ಶೆಟ್ಟಿ ದೇಲಟ್ಟು, ನರಸಿಂಹ ಭೋವಿ ಅವರು ಬೋಟ್ ಬಳಸಿ ಸತತ 2 ಗಂಟೆಗಳ ಕಾಲ ತೀವ್ರ ಶೋಧ ಕಾರ್ಯ ನಡೆಸಿದರು. ಆದರೆ, ಒಂದು ಕಡೆ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಇನ್ನೊಂದೆಡೆ ಮೋಡ ಕವಿದ ವಾತಾವರಣದಿಂದಾಗಿ ಕತ್ತಲು ಆವರಿಸಿದ್ದರಿಂದ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು.
ಮುಳುಗು ತಜ್ಞರಿಂದ ಕಾರ್ಯಾಚರಣೆ:
ಜೂನ್ 14ರ ಆದಿತ್ಯವಾರದಂದು ಪ್ರಸಿದ್ಧ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಸ್ಥಳಕ್ಕೆ ಆಗಮಿಸಿ ವಿಶೇಷ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ. ಸ್ಥಳದಲ್ಲಿ ಕೋಟ ಪೊಲೀಸರು ಬೀಡು ಬಿಟ್ಟಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

