ತೆಕ್ಕಟ್ಟೆ: ಇಲ್ಲಿನ ಬೇಳುರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಬೆಟ್ಟು ಸುಳಿಗುಂಡಿ ಹಿರೇಹೊಳೆಯಲ್ಲಿ ಈಜಲು ತೆರಳಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಮೃತರನ್ನು ಸಾಹೆಬರಕಟ್ಟೆ ಗರಿಕೆಮಠ ಮೂಲದ ಸಾಮರಾಜ್ (21) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಸಾಮರಾಜ್, ಜೂನ್ 13ರ ಶನಿವಾರ ಸಂಜೆ ಸುಮಾರು 4.30ರ ವೇಳೆಗೆ ಆರ್ಬೆಟ್ಟು ಸುಳಿಗುಂಡಿ ಹಿರೇಹೊಳೆಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅವರು ಮುಳುಗಿ ನಾಪತ್ತೆಯಾಗಿದ್ದರು.
ಮುಳುಗುತಜ್ಞ ಈಶ್ವರ್ ಮಲ್ಪೆ ತಂಡದಿಂದ ಶೋಧ ಕಾರ್ಯ:
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡ ತಕ್ಷಣವೇ ಕಾರ್ಯಾಚರಣೆಗೆ ಇಳಿಯಿತು. ಭಾನುವಾರ ಬೆಳಗ್ಗಿನಿಂದಲೇ ಭಾರೀ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ, ಆಕ್ಸಿಜನ್ ಸಿಲಿಂಡರ್ ಬಳಸಿ ಹೊಳೆಯ ಆಳಕ್ಕೆ ಇಳಿದು ಶೋಧ ಕಾರ್ಯವನ್ನು ಮುಂದುವರಿಸಿದರು.
ನದಿಯ ಮಧ್ಯಭಾಗದಲ್ಲಿ ಪತ್ತೆಯಾದ ಮೃತದೇಹ:
ತಂಡದ ನಿರಂತರ ಕಾರ್ಯಾಚರಣೆಯ ಫಲವಾಗಿ, ಜೂನ್ 14ರ ರವಿವಾರ ಬೆಳಗ್ಗೆ ಸುಮಾರು 9.24ರ ವೇಳೆಗೆ ಹೊಳೆಯ ಮಧ್ಯಭಾಗದಲ್ಲಿ ಸಾಮರಾಜ್ ಅವರ ಮೃತದೇಹ ಪತ್ತೆಯಾಗಿದೆ. ಹುಡುಕಾಟ ನಡೆಸಿದ ನದಿಯ ಅಲ್ಪ ದೂರದಲ್ಲೇ ಶವ ಸಿಕ್ಕಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರು ಹಾಗೂ ಪೊಲೀಸರು ಜಮಾಯಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ಜರುಗಿವೆ.

