ಉಡುಪಿ ನಗರದ ಜಾಮಿಯಾ ಮಸೀದಿಯ ಒಳಗೆ ಜುಮಾ ನಮಾಝ್ ಮುಗಿಸಿ ಹೊರಬರುವ ವೇಳೆ ಮಸೀದಿಯ ಕಾರ್ಯದರ್ಶಿ ಮೇಲೆ ಐವರು ವ್ಯಕ್ತಿಗಳು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವ ಘಟನೆ ವರದಿಯಾಗಿದೆ. ಅಕ್ಟೋಬರ್ 9, 2026ರ ಶುಕ್ರವಾರ ಮಧ್ಯಾಹ್ನ 1:45ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಮಿಯಾ ಮಸೀದಿಯ ಕಾರ್ಯದರ್ಶಿ ಖಾಲೀದ್ ಅಬ್ದುಲ್ ಅಜೀಜ್ ಅವರು ನಮಾಝ್ ಮುಗಿಸಿ ಮಸೀದಿಯ ಒಳಗಡೆ ಇದ್ದ ವೇಳೆ, ಆರೋಪಿತರಾದ ನಝೀರ್ ಅಹ್ಮದ್, ಶಂಶುದ್ದೀನ್, ಹನೀಫ್, ಬಶೀರ್ ಅಬ್ದುಲ್ ರಹಮಾನ್ ಹಾಗೂ ಅಝರ್ ಎಂಬುವವರು ನಾಲ್ಕೂ ದಿಕ್ಕುಗಳಿಂದ ಏಕಾಏಕಿ ಸುತ್ತುವರಿದು ಹಲ್ಲೆ ನಡೆಸಿದ್ದಾರೆ. ಆರೋಪಿತರು ಮುಖ, ತಲೆ ಹಾಗೂ ಮೂಗಿನ ಭಾಗಕ್ಕೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಪ್ರಾಣ ಉಳಿಸಿಕೊಳ್ಳಲು ಆರೋಪಿತರಿಂದ ತಪ್ಪಿಸಿಕೊಂಡು ಮಸೀದಿಯ ಒಳಾಂಗಣದ ಕಡೆಗೆ ಓಡಿದಾಗಲೂ, ಬಿಡದೆ ಬೆನ್ನಟ್ಟಿದ ಗುಂಪು ಪುನಃ ಹಲ್ಲೆ ಮುಂದುವರಿಸಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನಗೆ ಕೊಲ್ಲದೇ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ.
ಈ ಗಂಭೀರ ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 145/2026ರಡಿ, ಬಿ.ಎನ್.ಎಸ್ (Bharatiya Nyaya Sanhita) ಕಾಯ್ದೆಯ ಕಲಂ 352, 351(2), 118(1) ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

