ಮಣಿಪಾಲ: ಇಲ್ಲಿನ ಕುಂಜಿಬೆಟ್ಟಿನಲ್ಲಿ ನಡೆದಿದ್ದ ಭಾರಿ ಮನೆ ಕಳ್ಳತನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿರುವ ಮಣಿಪಾಲ ಪೊಲೀಸರು, ಕುಖ್ಯಾತ ಅಂತರರಾಜ್ಯ ‘TATTO – 313’ ಗ್ಯಾಂಗ್ನ ಇಬ್ಬರು ಮುಸುಕುಧಾರಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 7,90,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 2 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ನಿವಾಸಿಯಾದ ಅಮಿತ ಡ್ಯಾನಿಯಲ್ ಎಂಬುವರು ಫೆಬ್ರವರಿ 3, 2026 ರಂದು ಮಧ್ಯಾಹ್ನ 1:45 ರ ಸುಮಾರಿಗೆ ತಮ್ಮ ಮನೆಯ ಬಾಗಿಲು ಮತ್ತು ಹೊರಗಿನ ಗೇಟ್ಗೆ ಬೀಗ ಹಾಕಿ ಮಕ್ಕಳೊಂದಿಗೆ ತಾಯಿ ಮನೆಗೆ ತೆರಳಿದ್ದರು. ಮರುದಿನ ಅಂದರೆ ಫೆಬ್ರವರಿ 4, 2026 ರಂದು ಮಧ್ಯಾಹ್ನ 1:30 ರ ವೇಳೆಗೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಅಮಿತ ಅವರಿಗೆ ಮಾಹಿತಿ ನೀಡಿದ್ದಾರೆ.
ಅಮಿತ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಫೆಬ್ರವರಿ 3 ರ ಮುಂಜಾನೆ 3:45 ರಿಂದ ಫೆಬ್ರವರಿ 4 ರ ಮಧ್ಯಾಹ್ನ 2:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಒಳನುಗ್ಗಿ, ಮನೆಯಲ್ಲಿದ್ದ ಸುಮಾರು 75 ಗ್ರಾಂ ತೂಕದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 15/2026, ಬಿಎನ್ಎಸ್ (BNS) ಕಲಂ 331(3), (4) ಮತ್ತು 305 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದ ತಂಡ, ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ನಡೆಸಿತು. ತೀವ್ರ ವಿಚಾರಣೆಯ ಸಂದರ್ಭದಲ್ಲಿ ಅವರು ಮಣಿಪಾಲದ ಕಳ್ಳತನ ಪ್ರಕರಣದ ಆರೋಪಿಗಳೆಂದು ದೃಢಪಟ್ಟಿದೆ. ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಕಳವಾದ ವಸ್ತುಗಳನ್ನು ರಿಕವರಿ ಮಾಡುವ ಸಲುವಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ವಿಚಾರಣೆ ವೇಳೆ ತಾವು ಕದ್ದ ಚಿನ್ನಾಭರಣಗಳನ್ನು ಶಿವಮೊಗ್ಗದ ಲಾಡ್ಜ್ ಒಂದರ ರೂಮ್ನಲ್ಲಿ ಬಚ್ಚಿಟ್ಟಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ. ತಕ್ಷಣ ಶಿವಮೊಗ್ಗಕ್ಕೆ ತೆರಳಿದ ಪೊಲೀಸ್ ತಂಡವು ಅಲ್ಲಿ ದಾಳಿ ನಡೆಸಿ ಸುಮಾರು 60 ಗ್ರಾಂ ತೂಕದ ಒಟ್ಟು 7,90,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.
ಪೊಲೀಸ್ ತನಿಖೆಯ ವೇಳೆ ಈ ಗ್ಯಾಂಗ್ನ ರೋಚಕ ಕಳ್ಳತನದ ಶೈಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ತಮ್ಮ ಕೈಗಳ ಮೇಲೆ ‘TATTO 313’ ಎಂಬ ಹಚ್ಚೆ (Tattoo) ಹಾಕಿಸಿಕೊಂಡಿದ್ದು, ಇದೇ ಹೆಸರಿನಲ್ಲಿ ಗ್ಯಾಂಗ್ ಗುರುತಿಸಿಕೊಂಡಿದ್ದರು. ಇವರು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿರುವ ಬೀಗ ಹಾಕಿದ ಮನೆಗಳನ್ನೇ ಪ್ರಮುಖವಾಗಿ ಗುರಿಯಾಗಿಸುತ್ತಿದ್ದರು.
ರಾತ್ರಿ ವೇಳೆಯಲ್ಲಿ ಕಳ್ಳತನಕ್ಕೆ ಇಳಿಯುತ್ತಿದ್ದ ಈ ಖದೀಮರು, ಗುರುತು ಸಿಗದಂತೆ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಹಾಗೂ ಕಾಲಿನ ಹೆಜ್ಜೆ ಗುರುತುಗಳು ಬೀಳದಂತೆ ಸಾಕ್ಸ್ ಧರಿಸುತ್ತಿದ್ದರು. ಕಬ್ಬಿಣದ ಮಾರಕ ಆಯುಧಗಳನ್ನು ಬಳಸಿ ಮನೆಯ ಬಾಗಿಲು ಅಥವಾ ಬೀಗ ಮುರಿದು ಕಳ್ಳತನ ಎಸಗುತ್ತಿದ್ದರು.
ಹಲವು ಪ್ರಕರಣಗಳಲ್ಲಿ ಭಾಗಿ
ಬಂಧಿತ ಅಂತರರಾಜ್ಯ ಕಳ್ಳರ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವಾರು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಪ್ರಸ್ತುತ ತನಿಖೆಯ ವೇಳೆ ಇವರು ಕಳೆದ 2025 ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

