ಉಡುಪಿ : ಹವಾಮಾನ ವೈಪರೀತ್ಯದ ನಡುವೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಭೀತಿಯೂ ಉಲ್ಬಣವಾಗುತ್ತಿದೆ.
ಮಳೆಗಾಲದಲ್ಲಿಯೂ 30ರಿಂದ 35 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣಾಂಶ ಇರುವುದು ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ಪದೇಪದೇ ಮಳೆ ಸುರಿಯುತ್ತಿರುವುದು ಹಾಗೂ ಕೆಲವೊಮ್ಮೆ ವಿಪರೀತ ಬಿಸಿಲು ಲಕ್ಷಣಗಳಿಂದ ಜನರು ಹೈರಾಣಾಗುತ್ತಿದ್ದಾರೆ.
ಉಷ್ಣಾಂಶದಲ್ಲಿ ಬಹಳಷ್ಟು ಏರುಪೇರಾಗುತ್ತಿರುವುದು ವಿವಿಧ ರೋಗರುಜಿಗಳಿಗೆ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಕಂಡುಬರುತ್ತಿರುವ ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಗುಣಮುಖವಾಗಲು ಕನಿಷ್ಠ ಎಂದರೂ ಒಂದು ವಾರಗಳಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತಿದೆ. ಮುಖ್ಯವಾಗಿ ಡೆಂಗ್ಯೂ, ಇಲಿಜ್ವರ, ಎಚ್1ಎನ್1, ಅರಿಸಾರ ಭೇದಿಯಂತಹ ಲಕ್ಷಣಗಳು ಹೆಚ್ಚಿನವರಲ್ಲಿ ಕಂಡುಬರುತ್ತಿದೆ. ಜಿಲ್ಲಾಸ್ಪತ್ರೆ ಸಹಿತ ಸರಕಾರಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಗುಣಮುಖ ವಿಳಂಬವಾಗುತ್ತಿರುವ ಕಾರಣ ರೋಗಿಗಳು ಆತಂಕಕ್ಕೆ ಈಡಾಗುತ್ತಿರುವ ಘಟನೆಗಳೂ ನಡೆಯುತ್ತಿವೆ.

