ಉಡುಪಿ : ಕಡಿಯಾಳಿಯ ಕೋಚಿಂಗ್ ಸೆಂಟರ್ ಗೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಬ್ರಹ್ಮಾವರ ಹಂದಾಡಿ ಬಾರಕೂರು ನಿವಾಸಿ ಪ್ರಕಾಶ್ ಎಂಬವರ ಪುತ್ರ ಆರ್ಯ(13) ಕೇರಳದ ಪಾಲ್ಘಾಟ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ನಿನ್ನೆ ಬೆಳಗ್ಗೆ ಉಡುಪಿ ಕಡಿಯಾಳಿಯಲ್ಲಿರುವ ಕೋಚಿಂಗ್ ಇನ್ಸ್ಟಿಟ್ಯೂಟ್ ಗೆಂದು ಹೋಗಿದ್ದ ಎಂಟನೇ ತರಗತಿಯ ವಿದ್ಯಾರ್ಥಿ ಆರ್ಯ, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದನು.
ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆರ್ಯ, ಇಂದ್ರಾಳಿ ರೈಲು ನಿಲ್ದಾಣದಿಂದ ರೈಲಿನ ಮೂಲಕ ಕೇರಳದ ಕಡೆ ತೆರಳಿರುವುದು ಕಂಡು ಬಂದಿದ್ದು, ಟಿಕೆಟ್ ಇಲ್ಲದೆ ಪ್ರಯಾಣಿಸಿದ ಆರ್ಯನನ್ನು ಪಾಲ್ಘಾಟ್ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಮಾಹಿತಿ ತಿಳಿದ ಉಡುಪಿ ಪೊಲೀಸರು ಪಾಲ್ಘಾಟ್ ಗೆ ತೆರಳಿದ್ದಾರೆಂದು ತಿಳಿದುಬಂದಿದೆ.

