ಉಡುಪಿ : ಕಾಂಗ್ರೆಸ್ ಎಷ್ಟೇ ಕೇಸ್ ಹಾಕಿದರೂ ಬಿಜೆಪಿ ಯುವಮೋರ್ಚಾ ಹೋರಾಟ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಕುಂದಾಪುರದ ಶಿಕ್ಷಕರಾದ ರಾಮಕೃಷ್ಣ ಅವರಿಗೆ ಸರ್ಕಾರ ಪ್ರಶಸ್ತಿ ಘೋಷಿಸಿ ನಂತರ ಹಿಜಾಬ್ ವಿಚಾರದಲ್ಲಿ ದ್ವೇಷ ಸಾಧಿಸಿ ಪ್ರಶಸ್ತಿ ತಡೆಹಿಡಿದ ಪ್ರಕರಣದ ವಿಚಾರವಾಗಿ ಮಣಿಪಾಲದಲ್ಲಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಹಾಗೂ 10 ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ನ ಸೌರಭ್ ಬಲ್ಲಾಲ್ ನೀಡಿದ ದೂರನ್ನು ಪರಿಶೀಲಿಸದೆ ಪೊಲೀಸ್ ಇಲಾಖೆ ಒತ್ತಡಕ್ಕೆ ಮಣಿದು ಕೇಸ್ ದಾಖಲಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರವಾಗಿದೆ.
ಒಂದು ವೇಳೆ ಇದು ಸರಿ ಎಂದಾದರೆ ದೇಶದ್ರೋಹಿ ಹೇಳಿಕೆ ನೀಡಿದ ಐವನ್ ಡಿಸೋಜ ಹಾಗೂ ಕಾಂಗ್ರೆಸ್ ಕಚೇರಿ ಎದುರು ಅನ್ಯಕೋಮಿನ ಯುವಕರೊಂದಿಗೆ ಗಲಾಟೆ ಮಾಡಿದ ಕಾಂಗ್ರೆಸ್ ನ ಸೌರಬ್ ಬಲ್ಲಾಲ್ ಇರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆ ಬಲ್ಲಾಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಿ ಎಂದರು.
ಇಲ್ಲವಾದರೆ ಯುವಮೋರ್ಚಾ ಜಿಲ್ಲಾದ್ಯಂತ ರಸ್ತೆಗಿಳಿದು ಹೋರಾಟ ಮಾಡಲಿದೆ ಹಾಗೆಯೇ ಕಾಂಗ್ರೆಸ್ ನ ಕೆಲವು ಕಿಡಿಗೇಡಿಗಳು ಎಷ್ಟೇ ಕೇಸ್ ದಾಖಲಿಸಲಿ, ಎಷ್ಟೇ ಅಪಪ್ರಚಾರ ಮಾಡಲಿ ಅದಕ್ಕೆಲ್ಲಾ ಹೆದರಿ ಯುವಮೋರ್ಚಾದ ಹೋರಾಟ ನಿಲ್ಲದು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ತಿಳಿಸಿದರು.

