ಮಂಗಳೂರು : ಐದು ವರ್ಷಗಳ ಹಿಂದೆ ಮಂಗಳೂರು ನಗರವನ್ನೇ ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ತೀರ್ಪು ನೀಡಿದ್ದಾರೆ.
ಮಂಗಳೂರಿನ ವೆಲೆನ್ಸಿಯಾ ಸಮೀಪದ ಸೂಟರ್ಪೇಟೆಯ ಜೋನಸ್ ಸ್ಯಾಮ್ಸನ್ ಯಾನೆ ಜೋನಸ್ ಜೌಲಿನ್ ಸ್ಯಾಮ್ಸನ್ (40), ವಿಕ್ಟೋರಿಯಾ ಮಥಾಯಿಸ್ (47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಪ್ರಕರಣದ ಅಪರಾಧಿಗಳು. ಈ ಪೈಕಿ ರಾಜು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲಿಯೇ ಇದ್ದಾರೆ.
ಏನಿದು ಪ್ರಕರಣ?
ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ (42) ಅವರು ಅತ್ತಾವರದಲ್ಲಿ ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದರು. ಜೊತೆಗೆ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ಕುರಿ ಫಂಡ್ನಲ್ಲಿ ಜೋನಸ್ ಸ್ಯಾಮ್ಸನ್ 2 ಸದಸ್ಯತ್ವ ಹೊಂದಿದ್ದು, ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು.
2019ರ ಮೇ 11ರಂದು ಬೆಳಗ್ಗೆ 9.15ಕ್ಕೆ ಹಣ ಕೇಳುವುದಕ್ಕಾಗಿ ಶ್ರೀಮತಿ ಶೆಟ್ಟಿ ಅವರು ಆರೋಪಿ ಜೋನಸ್ ಸ್ಯಾಮ್ಸನ್ನ ಮನೆಗೆ ತೆರಳಿದ್ದರು. ಅಲ್ಲಿ ಸ್ಯಾಮ್ಸನ್ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿ ತಲೆಗೆ ಹೊಡೆದಿದ್ದ. ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿ ಅವರನ್ನು ಜೋನಸ್ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಕೊಂಡೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ದೇಹವನ್ನು ಒಟ್ಟು 29 ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು.
ಜೋನಸ್ ಮತ್ತು ವಿಕ್ಟೋರಿಯಾ ಮೇಲಿನ ಕೊಲೆ, ಸುಲಿಗೆ ಮತ್ತು ಸಾಕ್ಷ್ಯನಾಶ ಆರೋಪಗಳು ಹಾಗೂ ರಾಜು ಮೇಲಿನ ಕೊಲೆಗೆ ಸಹಾಯ, ಕಳವು ಮಾಡಿರುವ ಸೊತ್ತುಗಳನ್ನು ಇಟ್ಟುಕೊಂಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಸಪ್ಟೆಂಬರ್ 17ಕ್ಕೆ ನಿಗದಿಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ಸಾಕ್ಷಿಗಳನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

