ಬೆಂಗಳೂರು : ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳದ್ದೇ ಕಾರುಬಾರು. ಒಂದು ಬಸ್ಸು ಇನ್ನೊಂದು ಬಸ್ಸಿನವರ ನಡುವೆಯೇ ಸಿಕ್ಕಾಪಟ್ಟೆ ಕಾಂಪಿಟೀಶನ್. ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಸೆಡ್ಡು ಹೊಡೆದು, ಅವರಿಗೆ ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡಿದ ಬೇಕಾದಷ್ಟು ಉದಾಹರಣೆಗಳಿವೆ.
ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಒಬ್ಬರಿಗೆ ಖಾಸಗಿ ಬಸ್ಸಿನ ಪ್ಯಾಸೆಂಜರ್ ಹೊಡೆದ ವಿಚಾರಕ್ಕೆ ಸಂಬಂಧಿಸಿದ ಕೋರ್ಟ್ ವಿಚಾರಣೆಯ ವೇಳೆ, ಹೈಕೋರ್ಟ್ ಜಡ್ಜ್ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ.
ನಾನು ಕೂಡಾ ಹಿಂದೆ ಕರ್ನಾಟಕ ಸಾರಿಗೆ ಪ್ರಾಧಿಕಾರದಲ್ಲಿ ಕೆಲಸ ಮಾಡಿದ್ದೆ. ಹಾಗಾಗಿ, ಕಾನೂನು ಏನು ಹೇಳುತ್ತೆ ಎಂದು ನನಗೆ ಪಾಠ ಮಾಡಲು ಬರಬೇಡಿ. ಆ ಖಾಸಗಿ ಬಸ್ಸಿನವನು ರೌಡಿ ರೀತಿಯಲ್ಲಿ ವರ್ತಿಸಿದ್ದು ತಪ್ಪು. ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳು, ಖಾಸಗಿ ಬಸ್ಸಿಗಾಗಿ ರಸ್ತೆಯಲ್ಲಿ ಓಡಾಡಬಾರದಾ ಎಂದು ಜಸ್ಟೀಸ್. ವೇದವ್ಯಾಸಾಚಾರ್ ಶ್ರೀಶಾನಂದ್ ಪ್ರಶ್ನಿಸಿದ್ದಾರೆ.
ಸಾರಿಗೆ ಸಂಸ್ಥೆಯ ಡ್ರೈವರಿಗೆ ಹೊಡೆಯಲು, ಅವನೇನು ರೌಡಿನಾ? ಯಾರು ಅವನಿಗೆ ಅಧಿಕಾರ ಕೊಟ್ಟಿದ್ದು. ಸ್ವಲ್ಪದಿನ ಜೈಲಿನಲ್ಲಿ ಇರಲಿ, ಆಗ ಅವನ ಕುಟುಂಬಕ್ಕೆ ಗೊತ್ತಾಗುತ್ತದೆ. ಪ್ಯಾಸೆಂಜರ್ ಯಾಕೆ ಸೀಟಿನಿಂದ ಕೆಳಗೆ ಬಂದು, ಡ್ರೈವರಿಗೆ ಹೊಡೆಯಬೇಕು ಎಂದು ಖಾಸಗಿ ಬಸ್ಸುಗಳ ಪರವಾಗಿ ವಾದ ಮಂಡಿಸಿದ ವಕೀಲರಿಗೆ ಜ.ಶ್ರೀಶಾನಂದ್ ಮೈಚಳಿ ಬಿಡಿಸಿದ್ದಾರೆ.
ಉಡುಪಿ ಬಸ್ ಸ್ಟ್ಯಾಂಡ್ ನಲ್ಲಿ ಖಾಸಗಿ ಬಸ್ಸುಗಳ ಗಲಾಟೆ ನಿಮಗೆ ಗೊತ್ತಿದೆಯಾ? ಯಾವ ಸಾರಿಗೆ ಸಂಸ್ಥೆ ಬಸ್ಸುಗಳು ಅಲ್ಲಿ ಸ್ಟಾಪ್ ಕೊಡುವ ಹಾಗಿಲ್ಲ. ಒಂದು ವೇಳೆ ಅಲ್ಲಿ ನಿಂತರೆ ಕೆಟ್ಟದಾಗಿ ತುಳುವಿನಲ್ಲಿ ಬಯ್ಯಲು ಆರಂಭಿಸುತ್ತಾರೆ. ಪ್ಯಾಸೆಂಜರ್ ತಮ್ಮ ಬಸ್ಸಿಗೆ ಹತ್ತಿಲ್ಲದಿದ್ದರೆ, ರಟ್ಟೆ ಎಳೆದು ತಮ್ಮ ಬಸ್ಸಿಗೆ ಹತ್ತಿಸಿಕೊಳ್ಳುತ್ತಾರೆ ಎಂದು ನ್ಯಾಯಮೂರ್ತಿಗಳು ವಿವರಣೆಯನ್ನು ನೀಡಿದ್ದಾರೆ.
ಸಾರಿಗೆ ಟ್ರಿಬ್ಯುನಲ್ ನಲ್ಲಿ ನಾನು ಇದ್ದಿದ್ದರಿಂದ, ಖಾಸಗಿ ಬಸ್ಸುಗಳು ಯಾವರೀತಿ ಕಾರ್ಯನಿರ್ವಹಿಸುತ್ತದೆ, ಟೈಮಿಂಗ್ಸ್ ಬಗ್ಗೆ ಚೆನ್ನಾಗಿ ಮಾಹಿತಿಯಿದೆ. ಡ್ರೈವರ್ ಮತ್ತು ಕಂಡಕ್ಟರ್ ಪಾರ್ಟ್ ಟೈಮ್ ಮಾತ್ರ ಆ ಕೆಲಸ, ಫುಲ್ ಟೈಮ್ ರೌಡಿಗಳು ಎಂದು ಜಸ್ಟೀಸ್ ಶ್ರೀಶಾನಂದ್ ಹೇಳಿದ್ದಾರೆ.
ಮಂಗಳೂರಿಗೆ ಹೋಗಲು ಮೂವತ್ತು ನಿಮಿಷ ಉಡುಪಿ ಪ್ರೈವೇಟ್ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದಾಗ ನನಗಾದ ಅನುಭವವಿದು. ಸಾರಿಗೆ ಸಂಸ್ಥೆಯ ಡ್ರೈವರಿಗೆ ಹೊಡೆದ ಖಾಸಗಿ ಬಸ್ಸಿನವನು ಎಷ್ಟು ಪರಿಹಾರ ಕೊಡುತ್ತಾನೆ, ಇಲ್ಲವೇ ಜೈಲಿಗೆ ಹೋಗುತ್ತಾನಾ ಎಂದು ಜಸ್ಟೀಸ್. ಶ್ರೀಶಾನಂದ್ ಎಚ್ಚರಿಸಿದ್ದಾರೆ.
ಹತ್ತು ಸಾವಿರ ರೂಪಾಯಿ ಕೊಡುತ್ತಾರೆ ಎಂದು ಖಾಸಗಿ ಬಸ್ ಪರವಾಗಿ ವಾದ ಮಂಡಿಸಿದ ವಕೀಲರಿಗೆ ಮತ್ತೆ ಬೆಂಡೆತ್ತಿದ ನ್ಯಾಯಮೂರ್ತಿಗಳು, ಖಾಸಗಿ ಬಸ್ಸಿನವನ ಪರವಾಗಿ ಅನುಕಂಪ ತೋರಿಸುವ ಅವಶ್ಯಕತೆಯಿಲ್ಲ, ಅವನು ಜೈಲಿನಲ್ಲೇ ಇರಲಿ ಬಿಡಿ ಎಂದು ಪ್ರತಿಕ್ರಿಯಿಸಿದ್ದಾರೆ.

