ಕಾಸರಗೋಡು : ಅಪರೂಪದ ಹಾಗೂ ಮಾರಣಾಂತಿಕ ರೋಗವಾಗಿರುವ ಮಿದುಳನ್ನು ತಿನ್ನುವ ಅಮೀಬಾ ಜ್ವರಕ್ಕೆ ಕೇರಳದಲ್ಲಿ ಎರಡು ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ನಿಂದ ಕಾಸರಗೋಡಿನ ಯುವಕನೋರ್ವ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಮೃತ ಮಣಿಕಂಠನ್ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಮುಂಬೈ ಅಂಗಡಿಯಲ್ಲಿ ಸಹೋದರ ಶಶಿ ಜೊತೆಗೆ ಕೆಲಸ ನಿರ್ವಹಿಸುತ್ತಿದ್ದರು. ಅಸೌಖ್ಯ ಕಾರಣದಿಂದ ಇತ್ತೀಚೆಗೆ ಊರಿಗೆ ಬಂದಿದ್ದರು.
ಜ್ವರ ಎಂದು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ್ವರ ಕಡಿಮೆಯಾಗದ ಕಾರಣ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆಯಿಂದ ಅಮಿಬಿಕ್ ಸೋಂಕು ದೃಢಪಟ್ಟಿತ್ತು. ಮುಂಬೈಯಿಂದ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಯಾವುದೇ ಆತಂಕ ಪಡಬೇಕಿಲ್ಲ ಆದ್ರೆ ಜ್ವರದ ಬಗ್ಗೆ ಮುನ್ನಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಅಮೀಬಿಕ್ ಎನ್ಸೆಫಾಲಿಟಿಸ್, ವೈರಲ್ ಎನ್ಸೆಫಾಲಿಟಿಸ್, ಜಪಾನೀಸ್ ಜ್ವರ ಮತ್ತು ಬ್ಯಾಕ್ಟೀರಿಯಾದ ಮೆನಿಂಜೈಟಿಸ್ನಂತಹ ಇತರ ಮಿದುಳಿನ ಸೋಂಕುಗಳಂತೆ ಇದೇ ರೀತಿಯ ರೋಗಲಕ್ಷಣಗಳನ್ನು ನೀಡುತ್ತದೆ. ಸಾವಿನ ನಿಖರವಾದ ಕಾರಣವನ್ನು ಖಚಿತಪಡಿಸಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

