ಕುಂದಾಪುರ : ನಿಂತಿದ್ದ ಇನೋವಾ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ತಾಲೂಕಿನ ಅರಾಟೆ ಸೇತುವೆ ಬಳಿ ನಡೆದಿದೆ.
ಭಟ್ಕಳ ಮೂಸ ನಗರದ ನಿವಾಸಿ ದಿವಂಗತ ಅಬೂಬಕರ್ ಸಿದ್ದೀಕ್ವಾ ಅವರ ಪುತ್ರ ಮೊಹಮ್ಮದ್ ನಾಸಿರ್ ಸಿದ್ದೀಕ್ವಾ ಮೃತರು.
ನಾಸಿರ್ ಕುಟುಂಬದವರೊಂದಿಗೆ ಮಂಗಳೂರಿನಿಂದ ಭಟ್ಕಳದ ಮನೆಗೆ ಬರುತ್ತಿದ್ದ ವೇಳೆ ಅರಾಟೆ ಸೇತುವೆ ಬಳಿ ಬರುತ್ತಿದಾಗ ವಾಹನದಿಂದ ಶಬ್ಧ ಕೇಳಿ ಬಂದಿದ್ದು, ನಾಸಿರ್ ಕಾರನ್ನು ನಿಲ್ಲಿಸಿದ್ದರು ಎನ್ನಲಾಗಿದೆ.
ರಸ್ತೆ ಬದಿ ವಾಹನ ನಿಲ್ಲಿಸಿ ಸಮಸ್ಯೆ ಪರಿಶೀಲಿಸಲು ಮುಂದಾಗಿದ್ದಾರೆ. ಬಳಿಕ ಮತ್ತೆ ಅವರು ಕಾರನ್ನು ಹತ್ತಲು ಮುಂದಾದಾಗ, ಅದೇ ಮಾರ್ಗದಲ್ಲಿ ಕುಂದಾಪುರದಿಂದ ಗಂಗೊಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ಕಾರಿನ ಡೊರಿಗೆ ಡಿಕ್ಕಿ ಹೊಡೆದಿದ್ದು, ಅಲ್ಲೇ ಇದ್ದ ನಾಸಿರ್ಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ತಕ್ಷಣ ನಾಸಿರ್ ರನ್ನು ಆಂಬ್ಯುಲೆನ್ಸ್ ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

