ಬೈಂದೂರು : ಪೇಟೆಯಲ್ಲಿನ ದೇವಸ್ಥಾನದ ಕೆರೆಯಲ್ಲಿ ಈಜಾಡಲೆಂದು ತೆರಳಿದ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ನಾಗೇಂದ್ರ (13) ಮತ್ತು ಮೊಹಮದ್ ಶಫಾನ್ (13) ಮೃತ ಬಾಲಕರು.
ನಾಗೇಂದ್ರ ಯೋಜನಾ ನಗರದ ನಿವಾಸಿ ಕೃಷ್ಣ ಅವರ ಪುತ್ರನಾಗಿದ್ದು, ಮೊಹಮದ್ ಶಫಾನ್ ರೈಲ್ವೆ ನಿಲ್ದಾಣದ ಬಳಿಯ ಶಾನು ಶಾಲಿಯಾನ್ ಅವರ ಪುತ್ರ.
ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಪರೀಕ್ಷೆ ಬರೆದು ಮನೆಗೆ ಬಂದು ಊಟ ಮುಗಿಸಿ ಈಜಾಡಲು ತೆರಳಿದ್ದರು. ಮಳೆ ಸುರಿಯುತ್ತಿದ್ದ ಕಾರಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೈಕಲ್, ಬಟ್ಟೆ ಪಾದರಕ್ಷೆಗಳು ಕಂಡು ಬಂದ ಕಾರಣ ಇಬ್ಬರು ನೀರು ಪಾಲಾಗಿರುವುದು ತಿಳಿದು ಬಂದಿದ್ದು, ಹುಡುಕಾಟಕ್ಕಿಳಿಯಲಾಗಿದ್ದು, ಶವಗಳನ್ನು ಕಾರ್ಯಾಚರಣೆ ನಡೆಸಿ ಬುಧವಾರ ನಸುಕಿನ ವೇಳೆ ಮೇಲಕ್ಕೆತ್ತಲಾಗಿದೆ.
ದಿನನಿತ್ಯವೂ ಕೆರೆಗೆ ಹಲವು ಮಂದಿ ಈಜಲೆಂದು ಬರುತ್ತಿದ್ದರು. ಆದರೆ ಮಂಗಳವಾರ ಯಾರೂ ಬಂದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಮೃತ ಬಾಲಕರಿಬ್ಬರಿಗೂ ಸರಿಯಾಗಿ ಈಜು ಬರದಿದ್ದುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

