ಮಲ್ಪೆ : ಕರಾವಳಿ ಭಾಗದ ಮಲ್ಪೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಸಂಜೆಯಾಗುತ್ತಿದ್ದಂತೆಯೇ ಮನೆ ಮನೆಗಳಲ್ಲಿ ಗೆಜ್ಜೆನಾದ, ಮದ್ದಳೆ, ತಾಳದ ಅಬ್ಬರ ಕೇಳಿಸುತ್ತದೆ. ಭಾಗವತಿಕೆಯ ಗಾಯನ ಮೊಳಗುತ್ತದೆ. ಇದು ತೊಟ್ಟಂನ ಬಡಾನಿಡಿಯೂರು ಗಜಾನನ ಯಕ್ಷಗಾನ ಕಲಾಸಂಘದ ಕಲಾವಿದರು ಕಳೆದ 67 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಚಿಕ್ಕಮೇಳದ ಯಕ್ಷಗಾನ ಪ್ರದರ್ಶನ.
ಅಕ್ಟೋಬರ್ ತಿಂಗಳ ಹುಣ್ಣಿಮೆಯಿಂದ ಆರಂಭಗೊಂಡು ನವರಾತ್ರಿಯ ಕೊನೆಯ ದಿನದವರೆಗೆ ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಚಿಕ್ಕಮೇಳದ ತಿರುಗಾಟಕ್ಕೆ ನವರಾತ್ರಿ ವಿಶೇಷ ಎಂಬ ಹೆಗ್ಗಳಿಕೆಯೂ ಇದೆ. ಎಲ್ಲ ಚಿಕ್ಕಮೇಳಗಳಂತೆ ಇಲ್ಲಿಯೂ ತಂಡವೊಂದು ಮನೆಗಳಿಗೆ ಭೇಡಿ ನೀಡಿ ಕಿರು ಪ್ರಸಂಗವನ್ನು ಆಡಿ ತೋರಿಸುತ್ತದೆ. ಆದರೆ, ವಿಶೇಷವೇನೆಂದರೆ, ಇದು ಕೇವಲ ಹಿಂದೂಗಳ ಮನೆಗೆ ಮಾತ್ರವಲ್ಲ ಕ್ರಿಶ್ಚಿಯನ್, ಮುಸ್ಲಿಂ ಸಮುದಾಯದ ಮನೆಗಳಲ್ಲೂ ಪ್ರದರ್ಶನ ನೀಡುತ್ತದೆ.
ತೊಟ್ಟಂ ಮೇಳದ ಈ ಪ್ರದರ್ಶನಕ್ಕೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರಿಂದ ದೊಡ್ಡ ಮಟ್ಟದ ಪ್ರೋತ್ಸಾಹವಿದೆ. ಇಲ್ಲಿ ಇರುವವರು ಮಾತ್ರವಲ್ಲ, ವಿದೇಶದಲ್ಲಿರುವವರೂ ಬೆಂಬಲಿಸುತ್ತಾರೆ.

