ಉಡುಪಿ ಜಿಲ್ಲೆಯ ಪ್ರಮುಖ ಪೌರಾಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ಷೇತ್ರ ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ..
ಚಕ್ರಾ ನದಿಯ ತಟದಲ್ಲಿಯೇ ವಿರಾಜಮಾನವಾಗಿ ಕಂಗೊಳಿಸುವ ಶ್ರೀ ಕ್ಷೇತ್ರ ಬಗ್ವಾಡಿಯ ಮಹಿಷಾಸುರ ಮರ್ದಿನಿ ದೇವಸ್ಥಾನ.
ಚಾರಿತ್ರಿಕವಾದ ಮೊಗವೀರ ಸಮಾಜದ ಕುಲಮಾತೆ ಹಾಗೂ ಆರಾಧ್ಯ ದೇವತೆ ಬಗ್ವಾಡಿ ಮಹಿಷಾಸುರ ಮರ್ದಿನಿ., ಹಿಂದೆ ಹುಲ್ಲಿನ ಸೂರಿನಿಂದಲೂ, ನಂತರ ಹಂಚಿನ ಸೂರಿನಿಂದಲೂ ಈಗ ಶಿಲಾಮಯ ದೇವಾಲಯವಾಗಿಯೂ ರಾರಾಜಿಸುತ್ತಿದೆ.
ಮೊಗವೀರ ಸಮಾಜ ಬಾಂಧವರ ಮಹಾ ಕನಸು ನನಸಾಗಿದ್ದು 2006ರಲ್ಲಿ. ಕೇವಲ ನಾಲ್ಕು ತಿಂಗಳು ಇಪ್ಪತ್ತು ದಿನದಲ್ಲಿ ಈ ಭವ್ಯ ನಿರ್ಮಾಣವಾಗಿದೆಯೆಂದರೆ ಅದೊಂದು ಅಚ್ಛರಿಯೇ ಸರಿ. ಊಹಿಸಲು ಸಾಧ್ಯವಿಲ್ಲದಂತೆ ಕ್ಷಿಪ್ರ ಅವಧಿಯಲ್ಲಿ ದೇವಳ ಪುನರುತ್ಥಾನಗೊಂಡಿದ್ದು, ಒಂದು ದಾಖಲೆ.
ಆರಾಧ್ಯ ಮೂರ್ತಿ ಶ್ರೀದೇವಿಯ ವಿಗ್ರಹ – ಒಂದು ಶಿಲಾಮೂರ್ತಿ. ಸುಮಾರು 5 ಅಡಿಗಳಷ್ಟು ಎತ್ತರದ ಏಕಶಿಲಾ ವಿಗ್ರಹವಿದು. ನಿಂತ ಭಂಗಿಯಲ್ಲಿರುವ ಮೂರ್ತಿ ಚತುರ್ಭುಜಗಳನ್ನೊಳಗೊಂಡಿದ್ದು, ಬಲ ಮುಂದಿನ ಕೈಯಲ್ಲಿ ತನ್ನಷ್ಟೇ ಎತ್ತರದ ತ್ರಿಶೂಲವನ್ನು ಧರಿಸಿದೆ. ಎಡ ಮುಂದಿನ ಕೈಯಲ್ಲಿ ತಾನು ಬಗ್ಗು ಬಡಿಯುವ ಮಹಿಷನ ಬಾಲವನ್ನು ಹಿಡಿದು ನೆಲಕ್ಕೆ ಬಡಿಯುವ ಭಂಗಿ. ಆ ಮೂಲಕ ಮಹಿಷಮರ್ದನವನ್ನೇ ತೋರಿಸುವ ಬಿಂಬ. ಆದ್ದರಿಂದ ಆಕೆ ಮಹಿಷಾಸುರ ಮರ್ದಿನಿ.

ತುಸು ಹಿಂದಿರುವ ಉಳಿದೆರಡು ಕೈಗಳು ವರದ ಹಸ್ತಗಳಂತೆ ಒಂದರಲ್ಲಿ ಪ್ರಸಾದ, ಇನ್ನೊಂದರಲ್ಲಿ, ಖೇಟಕಾಯುಧ. ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು 2 ಅಡಿ ಎತ್ತರದ, 4*3 ಅಡಿ ವಿಸ್ತೀರ್ಣದ ಶಿಲಾಪೀಠದ ಮೇಲೆ. ಗರ್ಭಗುಡಿಯ ಕೇಂದ್ರದಲ್ಲಿ ಅಷ್ಠಬಂಧದ ಮೇಲ್ಭಾಗದಲ್ಲಿ ಶಿಲಾಪೀಠವನ್ನು ಸ್ಥಿತಗೊಳಿಸಲಾಗಿದೆ.

ಮೊಗವೀರ ಮಹಾಜನ ಸೇವಾ ಸಂಘ(ರಿ.), ಬಗ್ವಾಡಿ ಹೋಬಳಿ, ಮುಂಬೈ ಹಾಗೂ ಕುಂದಾಪುರ ಶಾಖೆಯ ಆಡಳಿತದ ವ್ಯಾಪ್ತಿಗೆ ಒಳಪಟ್ಟು,ಮೊಗವೀರ ಯುವ ಸಂಘಟನೆಗಳು, ಬಗ್ವಾಡಿ ಹೋಬಳಿ ಮೊಗವೀರ ಸ್ತ್ರೀ ಶಕ್ತಿ ಹಾಗೂ ಸಮಾಜ ಬಾಂಧವರ ಪರಿಶ್ರಮದಿಂದ ದೇವಾಲಯ ನಿರ್ಮಾಣ ಪುನರ್ ನವೀಕರಣಗೊಂಡಿತು.

ಮೊಗವೀರ ಸಮಾಜ ಮಾತ್ರವಲ್ಲದೆ ಬಗ್ವಾಡಿ ಗ್ರಾಮಸ್ಥರು ಹಾಗೂ ಊರ – ಪರವೂರ ಭಕ್ತರಿಗೂ ಇದು ಶ್ರೇಷ್ಠವಾದ ಶೃದ್ದಾ ಕೇಂದ್ರ.
ತಾಯಿಯನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಿ, ಬೇಡಿದರೆ ವರಗಳನ್ನು ಕರುಣಿಸುವ ಮಹಾಮಾತೆ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ..


