ಉಡುಪಿ : ಆಟೋರಿಕ್ಷಾಕ್ಕೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ವಾಹನಗಳು ಏಕಮುಖವಾಗಿ ಸಂಚರಿಸುವ ರಸ್ತೆಯಲ್ಲಿ ರವೀಂದ್ರ ತನ್ನ ಟೆಂಪೋವನ್ನು ವಿರುದ್ಧ ದಿಕ್ಕಿನಲ್ಲಿ ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ಹಾವಂಜೆಯ ಪ್ರೋಕ್ಲಿ ನೆಲ್ಸನ್ ಡಿಸೋಜಾ ಅವರು ತನ್ನ ಆಟೋ ರಿಕ್ಷಾದಲ್ಲಿ ಪ್ರಯಾಣಿಕರಾದ ಮೈಕಲ್ ರಾಬರ್ಟ್, ಲಿನ್ಸಿ ಡಿಸೋಜಾ, ಪೂಜಾ ಮತ್ತು ಮಗು ಜೋಸ್ಲಿನ್ ಅವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದರು.
ಈ ವೇಳೆ ಟೆಂಪೋ, ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಿನ್ಸಿ ಡಿಸೋಜಾ ಅವರ ತಲೆಗೆ ಟೆಂಪೋದ ರಾಡ್ ತಾಗಿ ಗಾಯವಾಗಿದೆ. ಮಗು ಜೋಸ್ಲಿನ್ ಮುಖಕ್ಕೆ ಹಾಗೂ ಪೂಜಾ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಗಾಯಾಳು ಲೆನ್ಸಿ ಡಿಸೋಜಾ, ಮಗು ಜೋಸ್ಲಿನ್ ಅವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

