ಮಂಗಳೂರು: ಇತ್ತೀಚೆಗೆ ಪೇಜಾವರ ಶ್ರೀಗಳ ಕುರಿತು ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ಪುಡಿ ರಾಜಕಾರಣಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ಬೆನ್ನಲ್ಲೇ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಈ ಹೇಳಿಕೆಯನ್ನು ಖಂಡಿಸಿದ್ದು, ಶ್ರೀಗಳ ಬಗ್ಗೆ ಬಿಕೆ ಹರಿಪ್ರಸಾದ್ ಆಡಿದ ಮಾತುಗಳು ಹಿಂದೂ ಸಮಾಜಕ್ಕೆ ನೋವು ತಂದಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆಯಿಂದ ಯಾವುದೇ ಜಾತಿ ವರ್ಗ ಅಲ್ಲ, ಹಿಂದೂ ಸಮಾಜಕ್ಕೆ ನೋವಾಗಿದೆ. ಪರಿಶಿಷ್ಟರ ಕೇರಿಗಳಿಗೆ ಪ್ರಥಮ ಬಾರಿಗೆ ಪೇಜಾವರ ವಿಶ್ವೇಶತೀರ್ಥರೆ ಭೇಟಿ ಕೊಟ್ಟವರು. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿವಹಿಸಿದವರು, ಜನಾಂದೋಲನ ಕಾರ್ಯಕ್ರಮಗಳನ್ನು ರೂಪಿಸಿದವರು. ರಾಷ್ಟ್ರಮಟ್ಟದಲ್ಲಿ ಗೌರವವಿರುವ ವಿಶ್ವ ಪ್ರಸನ್ನರಿಗೆ ಈ ರೀತಿಯ ಲಘುವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ರಾಜಕೀಯ ನಾಯಕರು ಮಾತ್ರವಲ್ಲದೆ, ಬಿಕೆ ಹರಿಪ್ರಸಾದ್ರವರ ವಿವಾದಾದ್ಮಕ ಹೇಳಿಕೆ ವಿರುದ್ಧ ಬ್ರಾಹ್ಮಣ ಮಹಾ ಸಭಾ ಕಿಡಿಕಾರಿದ್ದಾರೆ. ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಸಂದೀಪ್ ಕುಮಾರ್ ಮಂಜರವರು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾವು ಬಿಕೆ ಹರಿಪ್ರಸಾದ್ ಹೇಳಿಕೆಯನ್ನು ಖಂಡಿಸುತ್ತದೆ. ಶ್ರೀಗಳ ವಿಚಾರಗಳು, ಅವರ ಸಾಮಾಜಿಕ ಕಳಕಳಿ ಏನು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ, ಶ್ರೀಗಳು ಗೋ ಸೇವೆ, ಬಡವರ ಸೇವೆ, ನಿರಾಶ್ರಿತರಿಗೆ ಮನೆ ಕಟ್ಟಿಸಿ ಕೊಟ್ಟಿದ್ದಾರೆ. ಆದರೆ ಪೇಜಾವರ ಶ್ರೀಗಳಿಗೆ ಕಾವಿ ಕಳಚಿ ಬನ್ನಿ ಎಂದು ಬಿಕೆ ಹರಿಪ್ರಸಾದ್ ಹೇಳಿರುವುದು ಅಕ್ಷಮ್ಯ ಅಪರಾಧ. ಕ್ಷಮೆಯಾಚಿಸದೆ ಇದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಸಂದೀಪ್ ಕುಮಾರ್ ಎಚ್ಚರಿಸಿದ್ದಾರೆ.

