ಬೆಳ್ತಂಗಡಿ : ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಫೇಸ್ಬುಕ್ ಫ್ರೆಂಡ್ಸ್ ಬಳಗದಲ್ಲಿದ್ದ ಮಹಿಳೆಯೋರ್ವಳು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ ಪ್ರಕರಣ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ತಕ್ಷಣವೇ ಸೂಕ್ತ ಕ್ರಮ ಕೈಗೊಂಡ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆ ಸಕಾಲಿಕ ಕ್ರಮದಿಂದ ರಕ್ಷಿಸಲಾಗಿದೆ.
ಬೆಳ್ತಂಗಡಿ ವ್ಯಾಪ್ತಿಯ ಖಾಸಗಿ ಕಾಲೇಜು ವಿದ್ಯಾರ್ಥಿಯೋರ್ವನ ಫೇಸ್ಬುಕ್ ಸಂಪರ್ಕದಲ್ಲಿದ್ದ ಮಹಿಳೆಯೋರ್ವಳು ಆತ್ಮೀಯತೆಯನ್ನು ಮೂಡಿಸಿ ವಿದ್ಯಾರ್ಥಿಗೆ ವೀಡಿಯೊ ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ವಿದ್ಯಾರ್ಥಿಗೆ ತನ್ನ ನಗ್ನ ದೇಹವನ್ನು ಕಾಣಿಸಿ ಆತನ ಭಾವನೆಯನ್ನು ಕೆರಳಿಸಲು ಯತ್ನಿಸಿದ್ದಾಳೆ.
ಬಳಿಕ ವಿದ್ಯಾರ್ಥಿಯ ಮುಖವನ್ನು ಅಶ್ಲೀಲ ವೀಡಿಯೋ ಕ್ರಿಯೆಟ್ ಮಾಡಲಾಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಬೆದರಿಸಿದ್ದಾನೆ. ಅಲ್ಲದೇ, ಈ ವೀಡಿಯೋ ವೈರಲ್ ಆಗಬಾರದೆಂದಲ್ಲಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಆತಂಕಕ್ಕೊಳಗಾದ ವಿದ್ಯಾರ್ಥಿ, ಈ ವಿಚಾರವನ್ನು ಮಾಧ್ಯಮ ಪ್ರತಿನಿಧಿಯೋರ್ವರ ಗಮನಕ್ಕೆ ತಂದಿದ್ದಾನೆ. ಅವರು ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯ ಹಾಗೂ ಸೈಬರ್ ಕ್ರೈಮ್ ವಿಭಾಗಕ್ಕೆ ತಕ್ಷಣವೇ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಪೊಲೀಸರು ಸಂಬಂಧಪಟ್ಟ ಖಾತೆಗಳನ್ನು ಬ್ಲಾಕ್ ಮಾಡುವಂತೆ ವಿದ್ಯಾರ್ಥಿಗೆ ತಿಳಿಸಿದ್ದಾರೆ.
ಹಣಕ್ಕಾಗಿ ಪೀಡಿಸುವ ಜಾಲಗಳು ಸಕ್ರೀಯವಾಗಿದ್ದು, ಈ ಜಾಲಕ್ಕೆ ಸಿಲುಕಿದರೂ ಭಯಪಡದೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ಸಹಾಯ ಸಂಖ್ಯೆ 1930ಕ್ಕೆ ಸಂಪರ್ಕಿಸಿ ಸಹಾಯಯಾಚಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.

